ADVERTISEMENT

ಟೂಲ್‌ಕಿಟ್‌ ಪ್ರಕರಣ | ಮಾಧ್ಯಮದಿಂದ ಖಾಸಗಿತನದ ಹಕ್ಕು ಉಲ್ಲಂಘನೆ: ದಿಶಾ ಆರೋಪ

‘ಸಿಖ್ಸ್‌ ಫಾರ್‌ ಜಸ್ಟಿಸ್‌’ನಿಂದ ಗಲಭೆಗೆ ಹಣ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2021, 22:13 IST
Last Updated 18 ಫೆಬ್ರುವರಿ 2021, 22:13 IST
   

ನವದೆಹಲಿ: ತಮ್ಮದು ಎಂದು ಹೇಳಲಾಗುತ್ತಿರುವ ವಾಟ್ಸ್‌ಆ್ಯಪ್‌ ಸಂವಾದದ ಆಧಾರದಲ್ಲಿ ಏಕಪಕ್ಷೀಯ, ಅಪಮಾನಕರ ಮತ್ತು ವ್ಯಂಗ್ಯದಿಂದ ಕೂಡಿದ ಅರ್ಧಸತ್ಯವನ್ನು ಪ್ರಕಟಿಸುವ ಮೂಲಕ ಕೆಲವು ಮಾಧ್ಯಮ ಸಂಸ್ಥೆಗಳು ತಮ್ಮ ಖಾಸಗಿತನದ ಹಕ್ಕನ್ನು ಉಲ್ಲಂಘಿಸಿವೆ. ಹೆಸರಿಗೆ ಮಸಿ ಬಳಿದು ನ್ಯಾಯಯುತ ತನಿಖೆ ಸಾಧ್ಯವಾಗದಂತೆ ಮಾಡುತ್ತಿವೆ. ಇಂತಹ ವರದಿ ಪ್ರಕಟಿಸುವುದಕ್ಕೆ ತಡೆ ನೀಡಬೇಕು ಎಂದು ದಿಶಾ ರವಿ ಅವರು ದೆಹಲಿ ಹೈಕೋರ್ಟ್‌ಗೆ ಗುರುವಾರ ಅರ್ಜಿ ಸಲ್ಲಿಸಿದ್ದಾರೆ.

ತನಿಖಾ ದಾಖಲಾತಿಗಳು, ಇತರರ ಜತೆ ತಾವು ನಡೆಸಿದ ವಾಟ್ಸ್‌ಆ್ಯಪ್‌ ಚಾಟ್‌ ಮತ್ತು ಇತರ ಸಂವಹನಗಳನ್ನು ತನಿಖಾ ಸಂಸ್ಥೆಗಳು ಮಾಧ್ಯಮಗಳಿಗೆ ಬಿಡುಗಡೆ ಮಾಡುವುದಕ್ಕೆ ತಡೆ ನೀಡಬೇಕು ಎಂದೂ ತಮ್ಮ ಅರ್ಜಿಯಲ್ಲಿ ದಿಶಾ ಕೋರಿದ್ದಾರೆ.

ಆದರೆ, ದಿಶಾ ವಿರುದ್ಧದ ತನಿಖೆಯ ವಿವರಗಳನ್ನು ಮಾಧ್ಯಮಕ್ಕೆ ಸೋರಿಕೆ ಮಾಡಿಲ್ಲ ಎಂದು ದೆಹಲಿ ಪೊಲೀಸರು ಹೈಕೋರ್ಟ್‌ಗೆ ತಿಳಿಸಿದ್ದಾರೆ.

ADVERTISEMENT

ತನಿಖೆಗೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ಮಾಧ್ಯಮಕ್ಕೆ ಸೋರಿಕೆ ಮಾಡಿಲ್ಲ ಎಂಬ ಪ್ರಮಾಣಪತ್ರ ಸಲ್ಲಿಸುವಂತೆ ನ್ಯಾಯಮೂರ್ತಿ ಪ್ರತಿಭಾ ಎಂ. ಸಿಂಗ್‌ ಅವರ ಪೀಠವು ದೆಹಲಿ ಪೊಲೀಸರ ಪರವಾಗಿ ಹಾಜರಾಗಿದ್ದ ಸಾಲಿಸಿಟರ್‌ ಜನರಲ್‌ ತುಷಾರ್ ಮೆಹ್ತಾ ಅವರಿಗೆ ಸೂಚಿಸಿತು.

ಟೈಮ್ಸ್ ‌ನೌ, ನ್ಯೂಸ್‌ 18 ಮತ್ತು ಇಂಡಿಯಾ ಟುಡೆ ಸುದ್ದಿ ವಾಹಿನಿಗಳನ್ನು ದಿಶಾ ಅವರ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಸುದ್ದಿ ಪ್ರಸಾರ ಗುಣಮಟ್ಟ ಪ್ರಾಧಿಕಾರ (ಎನ್‌ಬಿಎಸ್‌ಎ) ಮತ್ತು ಸುದ್ದಿ ವಾಹಿನಿಗಳ ಪರವಾಗಿ ಯಾರೂ ಹಾಜರಿಲ್ಲದ ಕಾರಣ ಈ ಪ್ರಾಧಿಕಾರ ಮತ್ತು ಸಂಸ್ಥೆಗಳಿಗೆ ನೋಟಿಸ್‌ ನೀಡಲಾಗಿದೆ. ಮುಂದಿನ ವಿಚಾರಣೆಯನ್ನು ಶುಕ್ರವಾರ ನಡೆಸುವುದಾಗಿ ಪೀಠವು ಹೇಳಿದೆ.

ತಮ್ಮ ಬಂಧನಕ್ಕೆ ಸಂಬಂಧಿಸಿ ಮಾಧ್ಯಮದಲ್ಲಿ ನಡೆಯುತ್ತಿರುವ ವಿಚಾರಣೆಯು ತೀವ್ರವಾಗಿ ಪೂರ್ವಗ್ರಹಪೀಡಿತವಾಗಿದ್ದು ವೇದನೆಗೆ ಕಾರಣವಾಗಿದೆ. ಪೊಲೀಸರು ಮತ್ತು ಕೆಲವು ಮಾಧ್ಯಮ ಸಂಸ್ಥೆಗಳು ತಮ್ಮ ಭಾವನೆಗಳ ಮೇಲೆ ದಾಳಿ ನಡೆಸುತ್ತಿವೆ ಎಂದು ದಿಶಾ ಅವರು ಹೇಳಿದ್ದಾರೆ.

ದೆಹಲಿಯ ಸೈಬರ್‌ ಘಟಕದ ಪೊಲೀಸರು ಬೆಂಗಳೂರಿನಿಂದಇದೇ 13ರಂದು ತಮ್ಮನ್ನು ಬಂಧಿಸಿದ್ದು ಸಂಪೂರ್ಣವಾಗಿ ಕಾನೂನುಬಾಹಿರ; ಆಧಾರರಹಿತ ಎಂದು ಅವರು ವಾದಿಸಿದ್ದಾರೆ. ಈಗ ಪ್ರಸಾರವಾಗುತ್ತಿರುವ ಸುದ್ದಿಯೇ ನಿಜವೆಂದು ನಂಬಿ ಜನರು ತಮ್ಮನ್ನು ಅಪರಾಧಿ ಎಂದು ಭಾವಿಸುವ ಸಾಧ್ಯತೆ ಅತ್ಯಂತ ಹೆಚ್ಚು ಎಂದೂ ಅವರು ಹೇಳಿದ್ದಾರೆ.

‘ಪೊಲೀಸರ ಕಾನೂನುಬಾಹಿರ ನಡವಳಿಕೆಯು ನನ್ನ ಖಾಸಗಿತನದ ಮೂಲಭೂತ ಹಕ್ಕು, ಘನತೆ ಮತ್ತು ವರ್ಚಸ್ಸನ್ನು ಸರಿಪಡಿಸಲಾರದ ರೀತಿಯಲ್ಲಿ ಹಾನಿ ಮಾಡಿದೆ. ವಾಟ್ಸ್‌ಆ್ಯಪ್‌ ಚಾಟ್‌ನಂತಹ ತನಿಖಾ ದಾಖಲಾತಿಗಳನ್ನು ಪೊಲೀಸರು ಮಾಧ್ಯಮಕ್ಕೆ ಸೋರಿಕೆ ಮಾಡಿದ್ದಾರೆ. ಈ ವಿವರಗಳು ತನಿಖಾ ಸಂಸ್ಥೆಯ ಬಳಿಯಲ್ಲಿ ಮಾತ್ರ ಇರಲು ಸಾಧ್ಯ’ ಎಂದಿದ್ದಾರೆ.

ವಾಟ್ಸ್‌ಆ್ಯಪ್‌ನಲ್ಲಿ ನಡೆಸಿದ್ದ ಖಾಸಗಿ ಚಾಟ್‌ಗಳನ್ನು ಕೂಡ ವಿವಿಧ ಮಾಧ್ಯಮಗಳು ಪ್ರಕಟಿಸಿವೆ. ಇದು ಕೇಬಲ್‌ ಟಿ.ವಿ. ಜಾಲಗಳ (ನಿಯಂತ್ರಣ) ಕಾಯ್ದೆಯ ಉಲ್ಲಂಘನೆ ಎಂದೂ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.