ADVERTISEMENT

ಐದು ರಾಜ್ಯಗಳ ಚುನಾವಣೆಗೆ ಬಿಜೆಪಿ ತಯಾರಿ: ಸಮಾಲೋಚನೆ

ಕೇಂದ್ರ ಸಚಿವರು, ಹಿರಿಯ ಮುಖಂಡರ ಸಮಾಲೋಚನೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2021, 19:45 IST
Last Updated 26 ಜೂನ್ 2021, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಮುಂದಿನ ವರ್ಷದ ಆರಂಭದಲ್ಲಿ ಐದು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ತಯಾರಿ ಆರಂಭಿಸಿದೆ. ಪ್ರಮುಖ ಕೇಂದ್ರ ಸಚಿವರು ಸೇರಿದಂತೆ ಹಿರಿಯ ಬಿಜೆಪಿ ನಾಯಕರುಪಕ್ಷದ ಕೇಂದ್ರ ಕಚೇರಿಯಲ್ಲಿ ಶನಿವಾರ ಸಭೆ ನಡೆಸಿದರು.

ಚುನಾವಣೆ ಬಗ್ಗೆ ಚರ್ಚಿಸುವುದು ಸಭೆಯ ಕಾರ್ಯಸೂಚಿಯಾಗಿತ್ತು. ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಸಂಬಂಧಿಸಿದ ರಾಜಕೀಯ ಮತ್ತು ಆಡಳಿತಾತ್ಮಕ ವಿಷಯಗಳ ಕುರಿತು ಚರ್ಚೆ ನಡೆಯಿತು. ಕೇಂದ್ರ ಸಂಪುಟ ಪುನರ್‌
ರಚನೆ ಸನ್ನಿಹಿತವಾಗಿದೆ. ಜೊತೆಗೆ ಪಕ್ಷದ ಉನ್ನತ ನಿರ್ಧಾರ ತೆಗೆದುಕೊಳ್ಳುವ ಬಿಜೆಪಿ ಸಂಸದೀಯ ಮಂಡಳಿ ಚುನಾವಣೆಯೂ ಇದ್ದು, ಇವುಗಳ ಬಗ್ಗೆ ಕೂಲಂಕಷ ಚರ್ಚೆ ನಡೆಯಿತು.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ನಿರ್ಮಲಾ ಸೀತಾರಾಮನ್, ನರೇಂದ್ರ ಸಿಂಗ್ ತೋಮರ್, ಸ್ಮೃತಿ ಇರಾನಿ, ಪ್ರಲ್ಹಾದ ಜೋಶಿ, ಕಿರಣ್ ರಿಜಿಜು ಮೊದಲಾದವರು ಸಭೆಯಲ್ಲಿ ಹಾಜರಿದ್ದರು.

ADVERTISEMENT

ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಮಣಿಪುರ ಮತ್ತು ಗೋವಾ ವಿಧಾನಸಭೆಗಳ ಅವಧಿ ಬರುವ ವರ್ಷ ಮುಕ್ತಾವಾಗಲಿದೆ. ಪಂಜಾಬ್ ಹೊರತುಪಡಿಸಿದರೆ, ಚುನಾವಣೆ ನಡೆಲಿರುವ ಉಳಿದ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ.

ಅತಿದೊಡ್ಡ ಪ್ರತಿಪಕ್ಷಗಳ ಮೈತ್ರಿಕೂಟ ರಚನೆಯ ಯತ್ನಗಳು ನಡೆಯುತ್ತಿರುವಾಗ, ಬಿಜೆಪಿಯ ಪ್ರಮುಖ ನಾಯಕರು ನಡೆಸಿರುವ ಈ ಸಭೆ ಮಹತ್ವ ಪಡೆದುಕೊಂಡಿದೆ. ವಿವಿಧ ರಾಜ್ಯಗಳಲ್ಲಿ ಸಂಘಟನೆಯ ಜವಾಬ್ದಾರಿ ಹೊತ್ತಿರುವ ಹಲವರು ಸಭೆಯಲ್ಲಿ ಭಾಗಿಯಾಗಿದ್ದರು. ಚುನಾವಣೆ ನಡೆಯುವ ರಾಜ್ಯಗಳಲ್ಲಿ ಭಿನ್ನಮತೀಯರ ಮನವೊಲಿಸುವುದು ಹಾಗೂ ಮೈತ್ರಿಕೂಟಕ್ಕೆ ಸ್ಥಳೀಯ ಪಕ್ಷಗಳನ್ನು ಸೇರಿಸಿಕೊಳ್ಳುವ ಬಗ್ಗೆ ಈ ಸಭೆಗಳಲ್ಲಿ ಚರ್ಚೆ ನಡೆದಿದೆ.

ಪ್ರಧಾನಿ ನರೇಂದ್ರ ಮೋದಿ ಅವರು 2014ರಲ್ಲಿ ಅಧಿಕಾರಕ್ಕೆ ಬರುವಲ್ಲಿ ಉತ್ತರ ಪ್ರದೇಶದ ಪಾತ್ರ ದೊಡ್ಡದು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಕೋವಿಡ್ ನಿರ್ವಹಿಸಿದ ಬಗ್ಗೆ ಪ್ರಶ್ನೆಗಳಿವೆ. ಬಿಜೆಪಿಯ ಹಿಂದಿನ ಮಿತ್ರಪಕ್ಷ ಶಿರೋಮಣಿ ಅಕಾಲಿ ದಳವು ಈ ಬಾರಿ ಪಂಜಾಬ್‌ನಲ್ಲಿ ಬಿಎಸ್‌ಪಿ ಜತೆ ಒಪ್ಪಂದ ಮಾಡಿಕೊಂಡಿದೆ. ಕಾಂಗ್ರೆಸ್ ರಾಜ್ಯ ಘಟಕವು ಆಂತರಿಕ ಭಿನ್ನಾಭಿಪ್ರಾಯದಿಂದ ನಲುಗಿದೆ. ಉತ್ತರ ಪ್ರದೇಶವು ಬಿಜೆಪಿಗೆ ರಾಜಕೀಯ ದೃಷ್ಟಿಯಿಂದ ನಿರ್ಣಾಯಕವಾಗಿದೆ.

ನೂತನ ಅಧ್ಯಕ್ಷರ ನೇಮಕ

ಬಿಜೆಪಿ ಎರಡನೇ ಬಾರಿಗೆ ಗದ್ದುಗೆ ಹಿಡಿದಿರುವ ಅಸ್ಸಾಂ ಹಾಗೂ ಚುನಾವಣೆ ನಡೆಯಲಿರುವ ಮಣಿಪುರ ರಾಜ್ಯ ಘಟಕಗಳಿಗೆ ಹೊಸ ಅಧ್ಯಕ್ಷರನ್ನು ಘೋಷಿಸಲಾಗಿದೆ. ಭಬೇಶ್ ಕಲಿತಾ ಅವರು ಅಸ್ಸಾಂ ಹಾಗೂ ಶಾರದಾ ದೇವಿ ಅವರು ಮಣಿಪುರ ಬಿಜೆಪಿ ರಾಜ್ಯ ಘಟಕಗಳ ಹೊಸ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.