ADVERTISEMENT

ಮಹಾರಾಷ್ಟ್ರದ ಹಲವೆಡೆ ಪ್ರವಾಹ, ತೆಲಂಗಾಣದಲ್ಲಿ ಮೃತರ ಸಂಖ್ಯೆ 50ಕ್ಕೆ ಏರಿಕೆ

ಪಿಟಿಐ
Published 15 ಅಕ್ಟೋಬರ್ 2020, 19:34 IST
Last Updated 15 ಅಕ್ಟೋಬರ್ 2020, 19:34 IST
ಹೈದರಾಬಾದ್‌ನಲ್ಲಿ ಮಳೆನೀರಿನಿಂದ ಜಲಾವೃತವಾಗಿರುವ ಹಲವು ವಸತಿ ಪ್ರದೇಶಗಳಲ್ಲಿ ಗುರುವಾರವೂ ನೀರಿನಮಟ್ಟ ಕಡಿಮೆಯಾಗಿರಲಿಲ್ಲ -- –ಪಿಟಿಐ ಚಿತ್ರ
ಹೈದರಾಬಾದ್‌ನಲ್ಲಿ ಮಳೆನೀರಿನಿಂದ ಜಲಾವೃತವಾಗಿರುವ ಹಲವು ವಸತಿ ಪ್ರದೇಶಗಳಲ್ಲಿ ಗುರುವಾರವೂ ನೀರಿನಮಟ್ಟ ಕಡಿಮೆಯಾಗಿರಲಿಲ್ಲ -- –ಪಿಟಿಐ ಚಿತ್ರ   

ಮುಂಬೈ: ಮಹಾರಾಷ್ಟ್ರದ ಮುಂಬೈ, ಪುಣೆ, ಸಾಂಗ್ಲಿ ಮತ್ತು ಸೊಲ್ಲಾಪುರ ಜಿಲ್ಲೆಗಳಲ್ಲಿ ಬುಧವಾರ ರಾತ್ರಿಯಿಂದ ಸುರಿದ ಭಾರಿ ಮಳೆಯ ಕಾರಣ ಪ್ರವಾಹ ಸ್ಥಿತಿ ಉಂಟಾಗಿದೆ. ಪುಣೆಯಲ್ಲಿ ಮಳೆ ನೀರಿನ ಪ್ರವಾಹದಲ್ಲಿ ನಾಲ್ವರು ಕೊಚ್ಚಿಹೋಗಿದ್ದಾರೆ. ಮಂಗಳವಾರ ರಾತ್ರಿಯಿಂದ ಸುರಿದ ಮಳೆಯಲ್ಲಿ ಮೃತಪಟ್ಟವರ ಸಂಖ್ಯೆ ಗುರುವಾರ ಸಂಜೆ ವೇಳೆಗೆ 27ಕ್ಕೆ ಏರಿಕೆಯಾಗಿತ್ತು.

ಪುಣೆಯಲ್ಲಿ 96 ಮಿಲಿಮೀಟರ್, ಕೊಲ್ಹಾಪುರದಲ್ಲಿ 54 ಮಿ.ಮೀ. ಮತ್ತು ಸೊಲ್ಲಾಪುರದಲ್ಲಿ 79 ಮಿ.ಮೀ. ಮಳೆಯಾಗಿದೆ.

ಸೊಲ್ಲಾಪುರ ಜಿಲ್ಲೆಯಲ್ಲಿ ಭೀಮಾ ನದಿ ಉಕ್ಕಿ ಹರಿಯುತ್ತಿರುವ ಕಾರಣ ಹಲವು ಗ್ರಾಮಗಳು ಜಲಾವೃತವಾಗಿವೆ. ಪಂಡರಾಪುರದಲ್ಲಿ ಹಲವು ದೇವಾಲಯಗಳು ಜಲಾವೃತವಾಗಿವೆ. ಕೊಲ್ಲಾಪುರ ಜಿಲ್ಲೆಯ ಹಲವು ಗ್ರಾಮಗಳೂ ಜಲಾವೃತವಾಗಿವೆ.

ADVERTISEMENT

ಪುಣೆಯ ಖನೋಟಾ ಜಿಲ್ಲೆಯಲ್ಲಿ ಹೊಳೆಯೊಂದನ್ನು ಬೈಕ್‌ನಲ್ಲಿ ದಾಟಲು ಹೋಗಿ ನಾಲ್ವರು ಕೊಚ್ಚಿಹೋಗಿ
ದ್ದಾರೆ. ಇವರಲ್ಲಿ ಮೂವರ ಶವಗಳನ್ನು ಪತ್ತೆಮಾಡಲಾಗಿದೆ. ಪಂಡರಾಪುರದಲ್ಲಿ ಮಳೆಗೆ ನೆನೆದು ದೇವಾಲಯದ ಗೋಡೆ ಕುಸಿದು ಬುಧವಾರ ಆರುಜನ ಮೃತಪಟ್ಟಿದ್ದರು. ಈ ಬಗ್ಗೆ ತನಿಖೆ ನಡೆಸಿ, ವರದಿ ನೀಡುವಂತೆ ಉಪಮುಖ್ಯಮಂತ್ರಿ ಅಜಿತ್ ಪವಾರ್ ಆದೇಶಿಸಿದ್ದಾರೆ.

ದಕ್ಷಿಣ ಮಹಾರಾಷ್ಟ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಅರಬ್ಬಿ ಸಮುದ್ರದತ್ತ ಸಾಗುತ್ತಿದೆ. ಹೀಗಾಗಿ ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆಯಾಗಲಿದೆ. ಶನಿವಾರದ ನಂತರ ಮಳೆ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮುಂದುವರಿದ ರಕ್ಷಣಾ ಕಾರ್ಯಾಚರಣೆ

ಹೈದರಾಬಾದ್: ತೆಲಂಗಾಣ ರಾಜಧಾನಿ ಹೈದರಾಬಾದ್‌ ಮತ್ತು ಸುತ್ತಲಿನ ಜಿಲ್ಲೆಗಳಲ್ಲಿ ಎರಡು ದಿನಗಳಿಂದ ಸುರಿಯುತ್ತಿದ್ದ ಭಾರಿ ಮಳೆ ಗುರುವಾರ ಸ್ವಲ್ಪ ಬಿಡುವು ನೀಡಿದೆ. ಮಳೆ ಸಂಬಂಧಿ ಘಟನೆಗಳಲ್ಲಿ ಮೃತಪಟ್ಟವರ ಸಂಖ್ಯೆ 50ಕ್ಕೆ ಏರಿಕೆಯಾಗಿದೆ. ಹೈದರಾಬಾದ್‌ ಒಂದರಲ್ಲೇ 11 ಜನರು ಮೃತಪಟ್ಟಿದ್ದಾರೆ.

ತೆಲಂಗಾಣದ ಹೈದರಾಬಾದ್‌ ಮತ್ತು ಇತರ ಪ್ರದೇಶಗಳಲ್ಲಿ ಬುಧವಾರದ ಭಾರಿ ಮಳೆಯಿಂದ ಜಲಾವೃತವಾಗಿದ್ದ ಪ್ರದೇಶಗಳಲ್ಲಿ ಗುರುವಾರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಜಲಾವೃತವಾಗಿರುವ ವಸತಿ ಪ್ರದೇಶಗಳಲ್ಲಿ ಸಿಲುಕಿರುವ ಜನರನ್ನು ಸುರಕ್ಷಿತ ಪ್ರದೇಶಗಳಲ್ಲಿ ಇರುವ ಶಿಬಿರಗಳಿಗೆ ಸ್ಥಳಾಂತರ ಮಾಡುವ ಕಾರ್ಯಾಚರಣೆ ನಡೆಯುತ್ತಿದೆ. ಮಳೆಯಿಂದ ಉಂಟಾದ ಪ್ರವಾಹದಿಂದ ₹ 5,000 ಕೋಟಿ ಹಾನಿಯಾಗಿದೆ. ಕೇಂದ್ರ ಸರ್ಕಾರವು ತಕ್ಷಣವೇ ₹1,350 ಕೋಟಿ ಪರಿಹಾರ ಹಣ ಬಿಡುಗಡೆ ಮಾಡಬೇಕು ಎಂದು ರಾಜ್ಯ ಸರ್ಕಾರವು ಕೋರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.