ADVERTISEMENT

ದೇಶದ ಹಲವೆಡೆ ಭೂ ಕುಸಿತ: 160ಕ್ಕೂ ಹೆಚ್ಚು ಮಂದಿ ಸಾವು

ರಾಯಿಟರ್ಸ್
Published 26 ಜುಲೈ 2021, 9:36 IST
Last Updated 26 ಜುಲೈ 2021, 9:36 IST
ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಭಾರಿ ಮಳೆಯಿಂದಾಗಿ ಉಂಟಾಗಿರುವ ಪ್ರವಾಹದಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಸೇನಾ ಸಿಬ್ಬಂದಿ         –ಪಿಟಿಐ ಚಿತ್ರ
ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಭಾರಿ ಮಳೆಯಿಂದಾಗಿ ಉಂಟಾಗಿರುವ ಪ್ರವಾಹದಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಸೇನಾ ಸಿಬ್ಬಂದಿ         –ಪಿಟಿಐ ಚಿತ್ರ   

ಮುಂಬೈ: ದೇಶದಲ್ಲಿ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹಲವೆಡೆ ಭೂಕುಸಿತ ಸಂಭವಿಸಿದೆ. ರಕ್ಷಣಾ ಪಡೆಯು ಅವಶೇಷಗಳಡಿ ಸಿಲುಕಿರುವ 60ಕ್ಕೂ ಹೆಚ್ಚು ಮಂದಿಗಾಗಿ ಶೋಧ ನಡೆಸುತ್ತಿದೆ. ಇದುವರೆಗೆ ಮಳೆಗೆ ಸಂಬಂಧಿಸಿದ ಘಟನೆಗಳಿಂದಾಗಿ 160ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

ಮಹಾರಾಷ್ಟ್ರ, ಗೋವಾ, ಕರ್ನಾಟಕ ಮತ್ತು ತೆಲಂಗಾಣದಲ್ಲಿ ಮಳೆಯಿಂದಾಗಿ ಭಾರಿ ಪ್ರಮಾಣದಲ್ಲಿ ಹಾನಿ ಉಂಟಾಗಿದೆ. ಸಾವಿರಾರು ಎಕರೆ ಪ್ರದೇಶ ಜಲಾವೃತಗೊಂಡಿದೆ. ಅಲ್ಲದೆ 2,30,000 ಜನರನ್ನು ಅಧಿಕಾರಿಗಳು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ.

‘ಮಹಾರಾಷ್ಟ್ರದಲ್ಲಿ ಭೂಕುಸಿತ ಮತ್ತು ಮಳೆಗೆ ಸಂಬಂಧಿಸಿದ ಅವಘಡಗಳಿಂದಾಗಿ 149 ಮಂದಿ ಸಾವಿಗೀಡಾಗಿದ್ದು, 64 ಮಂದಿ ನಾಪತ್ತೆಯಾಗಿದ್ದಾರೆ’ ಎಂದು ಮಹಾರಾಷ್ಟ್ರ ಸರ್ಕಾರದ ಪ್ರಕಟಣೆ ತಿಳಿಸಿದೆ.

ADVERTISEMENT

‘ರಾಯಗಢ ಮತ್ತು ಸತಾರಾದಲ್ಲಿ ಭೂಕುಸಿತದಿಂದಾಗಿ ಮಣ್ಣಿನಡಿಯಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ನಾವು ಶ್ರಮಿಸುತ್ತಿದ್ದೇವೆ. ಆದರೆ, ಅವರು ಮೂರು ದಿನಕ್ಕಿಂತ ಹೆಚ್ಚು ಕಾಲ ಮಣ್ಣಿನೊಳಗೆ ಸಿಲುಕಿರುವುದರಿಂದ ಜೀವಂತವಾಗಿರುವ ಸಾಧ್ಯತೆಗಳು ಕಡಿಮೆ’ ಎಂದು ಪ್ರಕಟಣೆ ತಿಳಿಸಿದೆ.

‘ಕರ್ನಾಟಕ, ತೆಲಂಗಾಣದಲ್ಲಿ ಪ್ರವಾಹದಿಂದಾಗಿ 12ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಕೃಷ್ಣಾ ಮತ್ತು ಗೋದಾವರಿ ನದಿಯಲ್ಲಿ ನೀರಿನ ಮಟ್ಟವು ಕ್ರಮೇಣ ಕಡಿಮೆಯಾಗುತ್ತಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಗೋವಾದಲ್ಲಿ ಪ್ರವಾಹದಿಂದಾಗಿ ನೂರಾರು ಮನೆಗಳು ಹಾನಿಗೊಳಗಾಗಿದ್ದು, ಇದು ನಾಲ್ಕು ದಶಕದಲ್ಲೇ ಅತ್ಯಂತ ಭೀಕರ ಪ್ರವಾಹವಾಗಿದೆ’ ಎಂದು ಗೋವಾದ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಹೇಳಿದ್ದಾರೆ.

‘ಪಶ್ಚಿಮ ಕರಾವಳಿಯಲ್ಲಿ ಮಳೆ ಕಡಿಮೆಯಾಗುತ್ತಿದೆ. ಇದು ರಕ್ಷಣಾ ಕಾರ್ಯಾಚರಣೆಗೆ ನೆರವಾಗಿದೆ. ಈ ವಾರವೂ ಇಲ್ಲಿ ಮಳೆ ಸುರಿಯಲಿದೆ. ಆದರೆ ಕಳೆದ ವಾರಕ್ಕೆ ಹೋಲಿಸಿದರೆ, ಅದರ ತೀವ್ರತೆ ಕಡಿಮೆ ಇರಲಿದೆ’ ಎಂದು ಐಎಂಡಿಯ ಪುಣೆ ಮೂಲದ ಹಿರಿಯ ವಿಜ್ಞಾನಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.