ADVERTISEMENT

ಆರ್ಥಿಕ ದುಃಸ್ಥಿತಿಗೆ ಪ್ರಧಾನಿ ಕಾರಣವೆಂದು ಆತ್ಮಹತ್ಯೆಗೆ ಯತ್ನಿಸಿದ ವ್ಯಾಪಾರಿ

ಪಿಟಿಐ
Published 9 ಫೆಬ್ರುವರಿ 2022, 14:28 IST
Last Updated 9 ಫೆಬ್ರುವರಿ 2022, 14:28 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬಾಗ್ಪತ್ (ಉತ್ತರ ಪ್ರದೇಶ): ‘ತನ್ನ ಆರ್ಥಿಕ ದುಃಸ್ಥಿತಿಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಜವಾಬ್ದಾರಿ’ ಎಂದು ಆರೋಪಿಸಿ ವ್ಯಾಪಾರಿಯೊಬ್ಬ ಮಂಗಳವಾರ ಫೇಸ್‌ಬುಕ್‌ ಲೈವ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಉತ್ತರಪ್ರದೇಶದ ಸುಭಾಷ್‌ ನಗರದಲ್ಲಿ ನಡೆದಿದೆ.

ಘಟನೆಯಲ್ಲಿ ಪತಿಯೊಂದಿಗೆ ವಿಷ ಸೇವಿಸಿದ ಪತ್ನಿ ಮೃತಪಟ್ಟಿದ್ದಾರೆ.

ಸುಭಾಷ್‌ನಗರದ ನಿವಾಸಿ ರಾಜೀವ್ ಥೋಮರ್ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಾಪಾರಿ. ಚಪ್ಪಲಿ ಅಂಗಡಿಯೊಂದರ ಮಾಲೀಕರಾಗಿರುವ ಅವರು ಮಂಗಳವಾರ ಫೇಸ್‌ಬುಕ್ ಲೈವ್‌ನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು. ಪತಿ ವಿಷ ಸೇವಿಸುತ್ತಿದ್ದನ್ನು ನೋಡಿದ ಪತ್ನಿ ಪೂನಂ ಕೂಡ ವಿಷ ಸೇವಿಸಿದ್ದಾರೆ. ಇಬ್ಬರನ್ನೂ ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಪತ್ನಿ ಬದುಕುಳಿಯಲಿಲ್ಲ. ವ್ಯಾಪಾರಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೀರಜ್ ಕುಮಾರ್ ಜದೌನ್ ತಿಳಿಸಿದ್ದಾರೆ.

ADVERTISEMENT

‘ನನ್ನ ಸಾವಿಗೆ ಮೋದಿ ಅವರೇ ಜವಾಬ್ದಾರಿ. ಮೋದಿ ಅವರಿಗೆ ಸ್ವಲ್ಪವಾದರೂ ನಾಚಿಕೆಯಿದ್ದರೆ ಅವರು ‍ಪ‍ರಿಸ್ಥಿತಿಯನ್ನು ಬದಲಾಯಿಸಲಿ. ಮೋದಿ ಅವರ ಎಲ್ಲಾ ಕಾರ್ಯಗಳು ತಪ್ಪು ಎಂದು ನಾನು ಹೇಳುತ್ತಿಲ್ಲ. ಆದರೆ, ಅವರು ಸಣ್ಣ ವ್ಯಾಪಾರಿ ಹಾಗೂ ರೈತರ ಹಿತೈಷಿ ಅಲ್ಲ’ ಎಂದು ಫೇಸ್‌ಬುಕ್‌ ಲೈವ್‌ ವೇಳೆ ರಾಜೀವ್‌ ದೂರಿದ್ದರು.

‘2020ರ ಲಾಕ್‌ಡೌನ್‌ ವೇಳೆ ರಾಜೀವ್ ಅವರಿಗೆ ವ್ಯಾಪಾರದಲ್ಲಿ ಭಾರಿ ನಷ್ಟ ಉಂಟಾಗಿ, ಮಾಡಿದ್ದ ಸಾಲವನ್ನು ತೀರಿಸಲು ಆಗಿರಲಿಲ್ಲ. ಅವರಿಗೆ ಇಬ್ಬರು ಗಂಡು ಮಕ್ಕಳು ಇದ್ದಾರೆ’ ಎಂದು ರಾಜೀವ್‌ ಸಂಬಂಧಿಕರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.