ಮಹಾಕುಂಭ ಮೇಳ
ಮಹಾಕುಂಭ ನಗರ: ಮಹಾಕುಂಭ ಮೇಳದಲ್ಲಿ ಮೌನಿ ಅಮಾವಾಸ್ಯೆಯಂದು ಸಂಭವಿಸಿದ ಕಾಲ್ತುಳಿತಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಶಿವಶಕ್ತಿ ಧಾಮದ ಪೀಠಾಧೀಶ್ವರ ಮತ್ತು ಶ್ರೀ ಪಂಚದಶನಂ ಜುನ ಅಖಾಡದ ಮಹಾಮಂಡಲೇಶ್ವರ ಯತಿ ನರಸಿಂಹಾನಂದ ಗಿರಿ ಸ್ವಾಮೀಜಿ ಆರೋಪಿಸಿದ್ದಾರೆ.
ಈ ಕುರಿತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಶ್ರೀ ಪಂಚದಶನಂ ಜುನಾ ಅಖಾಡದ ಬ್ಯಾನರ್‌ನಡಿಯಲ್ಲಿ ರಕ್ತದಲ್ಲಿ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಅವರು, ‘ಮೌನಿ ಅಮಾವಾಸ್ಯೆಯಂದು ನಿಮ್ಮ ನಿರ್ಲಜ್ಜ, ಭ್ರಷ್ಟ ಮತ್ತು ಸೂಕ್ಷ್ಮತೆ ಇಲ್ಲದ ಅಧಿಕಾರಿಗಳು ಹಿಂದೂಗಳ ಬಗ್ಗೆ ತೋರಿದ ಅಮಾನವೀಯ ವರ್ತನೆಯು ಈ ಪತ್ರವನ್ನು ಬರೆಯುವಂತೆ ಮಾಡಿದೆ. ಈ ಪತ್ರದಲ್ಲಿ ನನ್ನ ನಿಜವಾದ ಕಾಳಜಿ ಹಿಂದೂ ಸಮಾಜವನ್ನು ಸಮೀಪಿಸುತ್ತಿರುವ ಮಹಾ ದುರಂತದ ಕುರಿತಾಗಿದೆ. ಈ ದುರಂತವನ್ನು ತಡೆಯಲು, ಹಿಂದೂಗಳು ನರೇಂದ್ರ ಮೋದಿ ಅವರನ್ನು ಭಾರತದ ಪ್ರಧಾನಿಯಾಗಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ನಿಮ್ಮನ್ನು ಆಯ್ಕೆ ಮಾಡಿದ್ದಾರೆ. ಇಂದು ಹಿಂದೂಗಳ ದೊಡ್ಡ ವರ್ಗ ನಿಮ್ಮನ್ನು ಭಾರತದ ಪ್ರಧಾನಿಯಾಗಿ ನೋಡಲು ಬಯಸುತ್ತಿದೆ’ ಎಂದು ಬರೆದಿದ್ದಾರೆ.
‘ಈ ದುರಂತದ ಭಾಗವಾಗಿ ಈಗಾಗಲೇ ಇಸ್ಲಾಮಿ ಜಿಹಾದಿಗಳು ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆಯ ರೂಪವನ್ನು ಪಡೆದುಕೊಂಡಿದೆ, ಇದು ಹಿಂದೂ ಸಮಾಜಕ್ಕೆ ತೀವ್ರ ಅಪಾಯವನ್ನುಂಟುಮಾಡಿದೆ’ ಎಂದಿದ್ದಾರೆ.
‘ಹಿಂದಿನ ಸರ್ಕಾರಗಳು ತಮ್ಮ ಕಾರ್ಯಕರ್ತರು ಮತ್ತು ಮತದಾರರಿಗೆ ಬಂದೂಕು ಪರವಾನಗಿಯನ್ನು ಮುಕ್ತವಾಗಿ ವಿತರಿಸಿದರೆ, ನಿಮ್ಮ ಅಧಿಕಾರದ ಕಳೆದ ಏಳೂವರೆ ವರ್ಷಗಳಲ್ಲಿ, ಹಿಂದೂಗಳು ಯಾವುದೇ ಬಂದೂಕು ಪರವಾನಗಿಯನ್ನು ಪಡೆದಿಲ್ಲ. ಪ್ರತಿಯೊಬ್ಬ ಹಿಂದೂಗಳಿಗೆ ಬಂದೂಕು ಪರವಾನಗಿ ನೀಡಿ, ಇದರಿಂದ ಅವರು ತಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳನ್ನು ರಕ್ಷಿಸಲು ಸಾಧ್ಯ ಎಂದು ನಾನು ನಿಮಗೆ ಮನವಿ ಮಾಡುತ್ತೇನೆ’ ಎಂದು ಮುಖ್ಯಮಂತ್ರಿಗಳಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಮೌನಿ ಅಮಾವಾಸ್ಯೆಯಂದು ನಡೆದ ಕಾಲ್ತುಳಿತ ಪ್ರಕರಣದಲ್ಲಿ 30 ಭಕ್ತರುಮೃತಪಟ್ಟಿದ್ದು, 60 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಜನಸಂದಣಿಯಿಂದ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ಹೇಳಿಕೆ ನೀಡಿದ್ದರು. ಘಟನೆ ಕುರಿತು ಮುಖ್ಯಮಂತ್ರಿ ಯೋಗಿ ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.