ನವದೆಹಲಿ: ಲಿಂಗತ್ವ ಅಲ್ಪಸಂಖ್ಯಾತರನ್ನೂ ಒಳಗೊಂಡ ಸಮಗ್ರ ಲೈಂಗಿಕ ಶಿಕ್ಷಣವನ್ನು (ಸಿಎಸ್‌ಇ) ಶಾಲಾ ಪಠ್ಯಕ್ರಮದಲ್ಲಿ ಸೇರಿಸಬೇಕೆಂದು ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ನಡೆಸಿತು.
ಬಳಿಕ ಈ ಕುರಿತು ಪ್ರತಿಕ್ರಿಯಿಸುವಂತೆ ಕೇಂದ್ರ ಸರ್ಕಾರ, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಹಾಗೂ ಕರ್ನಾಟಕ ಸೇರಿದಂತೆ 6 ರಾಜ್ಯಗಳಿಗೆ ಸೂಚಿಸಿತು.
ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ಹಾಗೂ ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರಿದ್ದ ಪೀಠವು, ಅರ್ಜಿದಾರರ ಪರ ವಕೀಲರಾದ ಗೋಪಾಲ್, ಶಂಕರನಾರಾಯಣನ್ ಅವರ ವಾದವನ್ನು ಆಲಿಸಿತು. ಬಳಿಕ 8 ವಾರಗಳ ಒಳಗಾಗಿ ಪ್ರತಿಕ್ರಿಯಿಸುವಂತೆ ನೋಟಿಸ್ ಜಾರಿ ಮಾಡಿತು.
ಅರ್ಜಿದಾರರಾದ, 12ನೇ ತರಗತಿ ವಿದ್ಯಾರ್ಥಿನಿ ಕಾವ್ಯ ಮುಖರ್ಜಿ ಅವರು, ಕೇಂದ್ರ ಸರ್ಕಾರ, ಎನ್‌ಸಿಇಆರ್‌ಟಿ, ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ಪಂಜಾಬ್ ಮತ್ತು ತಮಿಳು ನಾಡುಗಳನ್ನು ಉಲ್ಲೇಖಿಸಿ ಅರ್ಜಿ ಸಲ್ಲಿಸಿದ್ದರು.
ಈ ರಾಜ್ಯಗಳ ಪಠ್ಯಕ್ರಮದಲ್ಲಿ ಸಿಎಸ್‌ಇ ಕುರಿತು ಲೋಪಗಳು ವರದಿಯಾಗಿವೆ. ಕೇರಳ ಇದಕ್ಕೆ ಹೊರತಾಗಿದೆ.
ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣಾ ಕಾಯಿದೆ 2019ರ ಸೆಕ್ಷನ್ 2(ಡಿ) ಮತ್ತು 13ರ ಅಡಿಯಲ್ಲಿ, ಲಿಂಗ ಗುರುತಿಸುವಿಕೆ, ಲಿಂಗ ವೈವಿಧ್ಯತೆ ಮತ್ತು ಲಿಂಗಗಳ ನಡುವೆ ವ್ಯತ್ಯಾಸದ ಕುರಿತ ವಿಷಯಗಳನ್ನು ಶಾಲಾ ಪಠ್ಯಕ್ರಮದಲ್ಲಿ ಸೇರಿಸುವಲ್ಲಿ ಸಂಬಂಧಪಟ್ಟ ಮಂಡಳಿಗಳು ನಿರ್ಲಕ್ಷ್ಯ ವಹಿಸಿವೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಎನ್‌ಸಿಇಆರ್‌ಟಿ ಹಾಗೂ ಕೆಲ ಎಸ್‌ಸಿಇಆರ್‌ಟಿಗಳು (ರಾಜ್ಯ ಘಟಕ) ಸುಪ್ರೀಂ ಕೋರ್ಟ್‌ನ ನಿರ್ದೇಶನಗಳನ್ನು ಪಾಲಿಸುವಲ್ಲಿ ವಿಫಲವಾಗಿವೆ. ಈ ನಿರ್ಲಕ್ಷ್ಯವು ಸಮಾನತೆಯ ಹಕ್ಕನ್ನು ಉಲ್ಲಂಘಿಸುವುದಲ್ಲದೇ ರಾಜ್ಯನೀತಿ ನಿರ್ದೇಶಕ ತತ್ವಗಳನ್ನೂ ದುರ್ಬಲಗೊಳಿಸುತ್ತದೆ ಎಂದೂ ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.