ADVERTISEMENT

ಉದ್ವಿಗ್ನತೆ: ಇಸ್ರೇಲ್ ಪ್ರಯಾಣದ ಬಗ್ಗೆ ಭಾರತ, ಅಮೆರಿಕ, ಬ್ರಿಟನ್ ಸಲಹೆ

ಪಿಟಿಐ
Published 16 ಜನವರಿ 2026, 2:33 IST
Last Updated 16 ಜನವರಿ 2026, 2:33 IST
<div class="paragraphs"><p>ಇಸ್ರೇಲ್ ಇರಾನ್ ಧ್ವಜ</p></div>

ಇಸ್ರೇಲ್ ಇರಾನ್ ಧ್ವಜ

   

– ರಾಯಿಟರ್ಸ್ ಚಿತ್ರ

ಜೆರುಸಲೆಮ್: ನೆರೆಯ ಇರಾನ್‌ನಲ್ಲಿ ಆಡಳಿತ ವಿರೋಧಿ ಉಗ್ರ ಪ್ರತಿಭಟನೆ ಮತ್ತು ಅಮೆರಿಕ ವಾಯುದಾಳಿ ಬೆದರಿಕೆ ಹಿನ್ನೆಲೆಯಲ್ಲಿ ಇಸ್ರೇಲ್‌ನಲ್ಲಿರುವ ಮತ್ತು ಇಸ್ರೇಲ್‌ಗೆ ಪ್ರಯಾಣ ಬೆಳೆಸಲು ಉದ್ದೇಶಿಸಿರುವ ತಮ್ಮ ಪ್ರಜೆಗಳಿಗೆ ಜಾಗೃತರಾಗಿರುವಂತೆ ಸೂಚಿಸಿದ್ದು, ಅನಗತ್ಯ ಪ್ರಯಾಣಗಳನ್ನು ತಪ್ಪಿಸುವಂತೆ ಭಾರತ, ಅಮೆರಿಕ ಮತ್ತು ಬ್ರಿಟನ್ ಸಲಹೆ ನೀಡಿವೆ.

ADVERTISEMENT

'ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಪ್ರಸ್ತುತ ಇರುವ ಉದ್ವಿಗ್ನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಇಸ್ರೇಲ್‌ನಲ್ಲಿರುವ ಎಲ್ಲ ಭಾರತೀಯ ಪ್ರಜೆಗಳು ಜಾಗರೂಕರಾಗಿರಲು ಮತ್ತು ಇಸ್ರೇಲ್ ಅಧಿಕಾರಿಗಳು ಹಾಗೂ ಹೋಮ್ ಫ್ರಂಟ್ ಕಮಾಂಡ್ ಹೊರಡಿಸಿದ ಸುರಕ್ಷತಾ ಮಾರ್ಗಸೂಚಿಗಳು, ಪ್ರೋಟೊಕಾಲ್‌ಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ’ಎಂದು ಭಾರತೀಯ ರಾಯಭಾರ ಕಚೇರಿ ಗುರುವಾರ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳು ಮತ್ತು ಅದರ ಅಧಿಕೃತ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿದೆ.

‘ಇಸ್ರೇಲ್‌ಗೆ ತೆರಳಲು ಉದ್ದೇಶಿಸಿರುವ ಭಾರತೀಯರು ಅನಿವಾರ್ಯವಲ್ಲದ ಪ್ರಯಾಣವನ್ನು ತಪ್ಪಿಸಲು ಸೂಚಿಸಲಾಗಿದೆ’ಎಂದು ಭಾರತೀಯ ಮಿಷನ್ ತಿಳಿಸಿದೆ.

ಯಾವುದೇ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ, ಭಾರತೀಯ ಪ್ರಜೆಗಳು ಭಾರತದ ರಾಯಭಾರ ಕಚೇರಿಯ 24x7ಸಹಾಯವಾಣಿ ಸಂಖ್ಯೆ: +972-54-7520711; +972-54-3278392 ಗಳನ್ನು ಸಂಪರ್ಕಿಸಬಹುದು. ಇ-ಮೇಲ್: cons1.telaviv@mea.gov.in ಮೂಲಕವೂ ಮಾಹಿತಿ ಹಂಚಿಕೊಳ್ಳಬಹುದು ಎಂದು ಸಲಹೆಯಲ್ಲಿ ತಿಳಿಸಲಾಗಿದೆ.

ಭಾರತೀಯ ರಾಯಭಾರ ಕಚೇರಿಯು ಕಳೆದ ಕೆಲವು ವರ್ಷಗಳಿಂದ ಭಾರತೀಯ ಪ್ರಜೆಗಳ ಡೇಟಾಬೇಸ್ ಅನ್ನು ಅಪ್ಡೇಟ್ ಮಾಡುವಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಅಲ್ಲದೆ, ರಾಯಭಾರ ಕಚೇರಿಯಲ್ಲಿ ನೋಂದಾಯಿಸಲು ಅವರಿಗೆ ಮನವಿ ಮಾಡುತ್ತಿದೆ.

ಇಸ್ರೇಲ್‌ನಲ್ಲಿರುವ ಭಾರತೀಯರ ಸಂಖ್ಯೆ 40,000 ದಾಟಿದ್ದು, ಕೋವಿಡ್-19 ಮತ್ತು ಇತ್ತೀಚಿನ ಯುದ್ಧದ ಸಂದರ್ಭಗಳಲ್ಲಿ ರಾಯಭಾರ ಕಚೇರಿಯು ಅವರ ನೆರವಿಗೆ ಧಾವಿಸಿದೆ.

ಇತ್ತ, ಜೆರುಸಲೆಮ್‌ನಲ್ಲಿರುವ ಅಮೆರಿಕದ ರಾಯಭಾರ ಕಚೇರಿಯು ಹೊಸ ಭದ್ರತಾ ಎಚ್ಚರಿಕೆಯನ್ನು ನೀಡಿದೆ. ಪ್ರಾದೇಶಿಕ ಉದ್ವಿಗ್ನತೆಯನ್ನು ಗಮನದಲ್ಲಿಟ್ಟುಕೊಂಡು ಅಮೆರಿಕದ ನಾಗರಿಕರು ತಮ್ಮ ಪ್ರಯಾಣ ಯೋಜನೆಗಳನ್ನು ಪರಿಶೀಲಿಸಬೇಕು ಮತ್ತು ತಮ್ಮ ಹಾಗೂ ಕುಟುಂಬಗಳ ರಕ್ಷಣೆ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದೆ.

ಬ್ರಿಟನ್ ವಿದೇಶಾಂಗ ಕಚೇರಿಯು ಸಹ ಇಸ್ರೇಲ್‌ಗೆ ಹೊಸ ಪ್ರಯಾಣ ಸಲಹೆಯನ್ನು ನೀಡಿದೆ. ಬ್ರಿಟಿಷ್ ನಾಗರಿಕರು ಇಸ್ರೇಲ್‌ಗೆ ಅನಗತ್ಯವಾಗಿ ಪ್ರಯಣ ಬೆಳೆಸದಂತೆ ಎಚ್ಚರಿಕೆ ನೀಡಿದೆ.

‘ಪ್ರಾದೇಶಿಕ ಉದ್ವಿಗ್ನತೆಯ ಅಪಾಯ ಹೆಚ್ಚಾಗಿದೆ. ಇದರಿಂದ ಪ್ರಯಾಣ ಅಡಚಣೆ ಮತ್ತು ಅನಿರೀಕ್ಷಿತ ಪರಿಣಾಮಗಳಿಗೆ ಕಾರಣವಾಗಬಹುದು’ಎಂದು ಬ್ರಿಟನ್ ಸಲಹೆಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.