
ಒ.ಪಿ.ಸಿಂಗ್
ಚಂಡೀಗಢ: ಹಾಡು ಮತ್ತು ವಿಡಿಯೊಗಳ ಮೂಲಕ ಗ್ಯಾಂಗ್ ಜೀವನಶೈಲಿಗೆ ಉತ್ತೇಜನ ನೀಡುವ ಗಾಯಕರನ್ನು ಅಪರಾಧಿಗಳ ರೀತಿಯೇ ಪರಿಗಣಿಸಬೇಕು. ಅವರ ವಿರುದ್ಧವೂ ಕಾನೂನಿನ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹರಿಯಾಣ ರಾಜ್ಯ ಪೊಲೀಸ್ ಮಹಾನಿರ್ದೇಶಕ ಒ.ಪಿ.ಸಿಂಗ್ ಭಾನುವಾರ ಹೇಳಿದ್ದಾರೆ.
‘ಪೋಷಕರು, ಶಿಕ್ಷಕರು ಮತ್ತು ಸಮಾಜವು ಯುವಜನತೆಗೆ ಕಲಿಸುವ ಒಳ್ಳೆಯ ಗುಣಗಳನ್ನು ಈ ಜನರು ಕೆಲವೇ ನಿಮಿಷಗಳಲ್ಲಿ ನಾಶ ಮಾಡುತ್ತಾರೆ’ ಎಂದು ‘ಎಕ್ಸ್’ ಪೋಸ್ಟ್‌ನಲ್ಲಿ ಹರಿಹಾಯ್ದಿದ್ದಾರೆ.
‘ಸಶಸ್ತ್ರ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರಿಗೂ ಶಿಕ್ಷೆಯಾಗಬೇಕು. ಬಂದೂಕು ಝಳಪಿಸಿದಲ್ಲಿ ಜೈಲು ವಾಸ ಖಚಿತ ಎಂಬ ಸಂದೇಶ ಅಪರಾಧಿಗಳಿಗೆ ರವಾನೆಯಾಗಬೇಕು’ ಎಂದಿದ್ದಾರೆ.
‘ಪ್ರಸಕ್ತ ವರ್ಷದಿಂದ ಹರಿಯಾಣ ಪೊಲೀಸರು, ಬಂದೂಕು ಸಂಸ್ಕೃತಿ, ಹಿಂಸೆಯ ವೈಭವೀಕರಣಕ್ಕೆ ಉತ್ತೇಜನ ನೀಡುವ ಹಾಡುಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ. ಅದೇ ರೀತಿ ಗಾಯಕರು, ಸಾಮಾಜಿಕ ಮಾಧ್ಯಮ ಮತ್ತು ಇತರ ವೇದಿಕೆಗಳ ಮೇಲೆ ಕಣ್ಣಿಟ್ಟಿದ್ದಾರೆ. ಸೈಬರ್ ಅಪರಾಧ ಘಟಕದ ತಂಡವು ಸಾಮಾಜಿಕ ಜಾಲತಾಣಗಳ ಮೇಲ್ವಿಚಾರಣೆ ನಡೆಸುತ್ತಾ, ಅಗತ್ಯವಿದ್ದಾಗ ಕ್ರಮ ಕೈಗೊಳ್ಳುತ್ತಿದೆ’ ಎಂದು ಅಧಿಕಾರಿಗಳು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.