ADVERTISEMENT

ಪೋಕ್ಸೊ: ಶೇ 99ರಷ್ಟು ಪ್ರಕರಣಗಳ ವಿಚಾರಣೆ ಕಳೆದ ಡಿಸೆಂಬರ್‌ನಿಂದ ಬಾಕಿ

‘ಪ್ರಜಾ ಫೌಂಡೇಷನ್‌’ ಸಂಸ್ಥೆ ಬಿಡುಗಡೆ ಮಾಡಿರುವ ಅಧ್ಯಯನ ವರದಿಯಲ್ಲಿ ಉಲ್ಲೇಖ

ಪಿಟಿಐ
Published 26 ನವೆಂಬರ್ 2021, 7:32 IST
Last Updated 26 ನವೆಂಬರ್ 2021, 7:32 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಮಕ್ಕಳ ವಿರುದ್ಧ ಅಪರಾಧಗಳ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂದಿದೆ. ಆದರೆ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯಡಿ (ಪೋಕ್ಸೊ) ದಾಖಲಾಗಿರುವ ಪ್ರಕರಣಗಳ ಪೈಕಿ ಶೇ 99 ಪ್ರಕರಣಗಳ ವಿಚಾರಣೆ 2020ರ ಡಿಸೆಂಬರ್‌ನಿಂದಲೂ ಬಾಕಿ ಇದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.

ಪೋಕ್ಸೊ ಕಾಯ್ದೆಯಡಿ ದಾಖಲಾಗಿರುವ ಪ್ರಕರಣಗಳು ಹಾಗೂ ಅವುಗಳ ವಿಚಾರಣೆಗೆ ಸಂಬಂಧಪಟ್ಟಂತೆ ‘ಪ್ರಜಾ ಫೌಂಡೇಷನ್‌’ ಎಂಬ ಸಂಸ್ಥೆ ಗುರುವಾರ ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಅಂಶವನ್ನು ವಿವರಿಸಲಾಗಿದೆ.

ಸಂತ್ರಸ್ತ ಮಕ್ಕಳಿಗೆ ತ್ವರಿತವಾಗಿ ನ್ಯಾಯ ಒದಗಿಸುವ ಉದ್ದೇಶದಿಂದ ಪೋಕ್ಸೊ ಕಾಯ್ದೆಯನ್ನು ರೂಪಿಸಲಾಗಿದೆ. ಆದರೆ, ಮಕ್ಕಳ ವಿರುದ್ಧದ ದೌರ್ಜನ್ಯ ಪ್ರಕರಣಗಳ ಪೈಕಿ ಶೇ 99ರಷ್ಟು ಪ್ರಕರಣಗಳ ವಿಚಾರಣೆ ಕಳೆದ ಡಿಸೆಂಬರ್‌ನಿಂದ ಬಾಕಿ ಇದೆ ಎಂಬ ಅಂಶದ ಬಗ್ಗೆ ವರದಿ ಗಮನಸೆಳೆದಿದೆ.

ADVERTISEMENT

ಕಳೆದ ವರ್ಷ ಪೋಕ್ಸೊ ಕಾಯ್ದೆ ಅಡಿ 1,197 ಪ್ರಕರಣಗಳು ದಾಖಲಾಗಿವೆ. ಇವುಗಳ ಪೈಕಿ ಶೆ 94ರಷ್ಟು ಪ್ರಕರಣಗಳಲ್ಲಿ ಬಾಲಕಿಯರೇ ಸಂತ್ರಸ್ತರಾಗಿರುವುದು ಕಂಡುಬಂದಿದೆ. ಈ ಪೈಕಿ 721 ಅತ್ಯಾಚಾರ ಪ್ರಕರಣಗಳಿದ್ದರೆ, 276 ಲೈಂಗಿಕ ದೌರ್ಜನ್ಯ ಪ್ರಕರಣಗಳಿವೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

721 ಪ್ರಕರಣಗಳಲ್ಲಿ, ಅತ್ಯಾಚಾರಕ್ಕೆ ಒಳಗಾದವರಲ್ಲಿ 12ರಿಂದ 18 ವರ್ಷ ವಯೋಮಾನದವರ ಸಂಖ್ಯೆಯೇ ಅಧಿಕ. ಶೇ 95ರಷ್ಟು ಪ್ರಕರಣಗಳಲ್ಲಿ ಸಂತ್ರಸ್ತೆಗೆ ಗೊತ್ತಿರುವವರೇ ಇಂಥ ಕೃತ್ಯ ಎಸಗಿರುವುದು ಕಂಡುಬಂದಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.