ADVERTISEMENT

ತ್ರಿಪುರಾ ವಿಧಾನಸಭೆ: ಟಿಪ್ರಮೋಥಾ ಪಕ್ಷ ‘ಕಿಂಗ್ ಮೇಕರ್’?

ತ್ರಿಕೋನ ಸ್ಪರ್ಧೆ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2023, 19:31 IST
Last Updated 4 ಫೆಬ್ರುವರಿ 2023, 19:31 IST
ಮೇಘಾಲಯ ಮುಖ್ಯಮಂತ್ರಿ ಹಾಗೂ ಎನ್‌ಪಿಪಿ ಮುಖ್ಯಸ್ಥ ಕಾನ್ರಾಡ್ ಸಂಗ್ಮಾ ಅವರು ತುರಾದಲ್ಲಿ ಶನಿವಾರ ನಾಮಪತ್ರ ಸಲ್ಲಿಸಿದರು–ಪಿಟಿಐ ಚಿತ್ರ
ಮೇಘಾಲಯ ಮುಖ್ಯಮಂತ್ರಿ ಹಾಗೂ ಎನ್‌ಪಿಪಿ ಮುಖ್ಯಸ್ಥ ಕಾನ್ರಾಡ್ ಸಂಗ್ಮಾ ಅವರು ತುರಾದಲ್ಲಿ ಶನಿವಾರ ನಾಮಪತ್ರ ಸಲ್ಲಿಸಿದರು–ಪಿಟಿಐ ಚಿತ್ರ   

ಅಗರ್ತಲಾ (ಪಿಟಿಐ): ಹೊಸದಾಗಿ ರಚನೆಯಾಗಿರುವ ಟಿಪ್ರಮೋಥಾ ಪಕ್ಷವು ತ್ರಿಪುರಾ ವಿಧಾನಸಭಾ ಚುನಾವಣೆಯಲ್ಲಿ ‘ಕಿಂಗ್ ಮೇಕರ್’ ಆಗುವ ಸಾಧ್ಯತೆಗಳಿವೆ. ಬಿಜೆಪಿ–ಐಪಿಎಫ್‌ಟಿ ಮೈತ್ರಿಕೂಟ ಹಾಗೂ ಕಾಂಗ್ರೆಸ್–ಎಡಪಕ್ಷಗಳ ಮೈತ್ರಿಕೂಟದ ವಿರುದ್ಧ ಟಿಪ್ರಮೋಥಾ ಸ್ಪರ್ಧಿಸಲಿದ್ದು, ರಾಜ್ಯದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಯಿದೆ.

ರಾಜಮನೆತನಕ್ಕೆ ಸೇರಿದ ಪ್ರದ್ಯೋತ್ ಮಾಣಿಕ್ಯ ದೇಬಬರ್ಮಾ ನೇತೃತ್ವದ ಟಿಪ್ರಮೋಥಾ, ಬಿಜೆಪಿ ಮೈತ್ರಿಕೂಟ ಅಥವಾ ಕಾಂಗ್ರೆಸ್ ಮೈತ್ರಿಕೂಟದ ಜೊತೆ ಚುನಾವಣಾ ಪೂರ್ವ ಹೊಂದಾಣಿಕೆ ಮಾಡಿಕೊಳ್ಳಲು ನಿರಾಕರಿಸಿದೆ. ಆದರೆ, ಚುನಾವಣೋತ್ತರ ಮೈತ್ರಿಯನ್ನು ಅಲ್ಲ
ಗಳೆದಿಲ್ಲ. ಪ್ರತ್ಯೇಕ ‘ಗ್ರೇಟರ್ ಟಿಪ್ರಲ್ಯಾಂಡ್’ ರಾಜ್ಯ ರಚಿಸುವ ತನ್ನ ಬೇಡಿಕೆಗೆ ಬೆಂಬಲ ನೀಡುವ ಯಾವುದೇ ಪಕ್ಷವನ್ನು ಅದು ಬೆಂಬಲಿಸುವ ಸಾಧ್ಯತೆಯಿದೆ.

ತ್ರಿಪುರಾ ಬುಡಕಟ್ಟು ಪ್ರದೇಶಗಳ ಸ್ವಾಯತ್ತ ಜಿಲ್ಲಾ ಮಂಡಳಿಗೆ (ಟಿಟಿಎಡಿಸಿ) 2021ರಲ್ಲಿ ನಡೆದ ಚುನಾವಣೆಯಲ್ಲಿ 30ರ ಪೈಕಿ 18 ಸ್ಥಾನಗಳನ್ನು ಗೆದ್ದುಕೊಂಡ ಬಳಿಕ, ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ಟಿಪ್ರಮೋಥಾ ಮುಂದಾಗಿದೆ. 60 ವಿಧಾನಸಭಾ ಕ್ಷೇತ್ರಗಳ ಪೈಕಿ ಬುಡಕಟ್ಟು ಪ್ರಾಬಲ್ಯದ 20 ಕ್ಷೇತ್ರಗಳನ್ನು ಗೆಲ್ಲುವ ಉತ್ಸಾಹದಲ್ಲಿದೆ.

ADVERTISEMENT

ಸ್ಥಳೀಯ ಪಕ್ಷ ಇಂಡಿಜಿನಿಯಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ (ಐಪಿಎಫ್‌ಟಿ) ಜತೆ ಆಡಳಿತಾರೂಢ ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು, ಮಿತ್ರಪಕ್ಷಕ್ಕೆ 5 ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದೆ. 2018ರ ಚುನಾವಣೆಯಲ್ಲಿ ಬಿಜೆಪಿ 36 ಕಡೆ, ಐಪಿಎಫ್‌ಟಿ 8 ಕ್ಷೇತ್ರಗಳಲ್ಲಿ ಗೆದ್ದಿದ್ದವು. ಆದರೆ ಪ್ರತ್ಯೇಕ ಟಿಪ್ರಲ್ಯಾಂಡ್ ರಚಿಸುವ ಮುಖ್ಯ ಬೇಡಿಕೆ ಈಡೇರಿಸುವಲ್ಲಿ ವಿಫಲವಾಗಿದ್ದರಿಂದ ಐಪಿಎಫ್‌ಟಿಗೆ ಜನಬೆಂಬಲ ಕಡಿಮೆಯಾಯಿತು ಎಂದು ವಿಶ್ಲೇಷಕರು ಹೇಳುತ್ತಾರೆ.

ಪ್ರತ್ಯೇಕ ರಾಜ್ಯ ಬೇಡಿಕೆಯನ್ನು ಟಿಪ್ರಮೋಥಾ ಪ್ರಮುಖ ಅಸ್ತ್ರವಾಗಿ ಬಳಸಿಕೊಂಡಿದ್ದರಿಂದ, ಅದರ ಜನಪ್ರಿಯತೆ ಹೆಚ್ಚಾಯಿತು. ಬುಡಕಟ್ಟು ಪ್ರದೇಶಗಳ ಮೇಲೆ ಐಪಿಎಫ್‌ಟಿಗೆ ಇದ್ದ ಹಿಡಿತ ಕ್ರಮೇಣ ಕಡಿಮೆಯಾಯಿತು. ದೇಬಬರ್ಮಾ ಅವರು ಪ್ರತ್ಯೇಕ ರಾಜ್ಯ ಬೇಡಿಕೆಗೆ ಪಟ್ಟು ಹಿಡಿದಿದ್ದರಿಂದ, ಟಪ್ರಮೋಥಾ ಜತೆ ಚುನಾವಣಾಪೂರ್ವ ಹೊಂದಾಣಿಕೆ ಮಾಡಿಕೊಳ್ಳುವ ಬಿಜೆಪಿಯ ಯತ್ನ ವಿಫಲವಾಯಿತು.

ರಾಜ್ಯದಲ್ಲಿ ವಿರೋಧಿಗಳಾಗಿ ಗುರುತಿಸಿಕೊಂಡಿದ್ದ ಕಾಂಗ್ರೆಸ್ ಹಾಗೂ ಸಿಪಿಎಂ ಪಕ್ಷಗಳು ಟಿಪ್ರಮೋಥಾ ಬೆಳವಣಿಗೆಯ ಬಳಿಕ ಹೊಂದಾಣಿಕೆ ಮಾಡಿಕೊಂಡಿವೆ. ಬುಡಕಟ್ಟು ಪ್ರದೇಶಗಳಲ್ಲಿ ಪಕ್ಷಕ್ಕೆ ನಿಷ್ಠಾವಂತ ಬೆಂಬಲಿಗರು ಇದ್ದಾರೆ ಎಂದು ಸಿಪಿಎಂ ವಿಶ್ವಾಸ ವ್ಯಕ್ತಪಡಿಸಿದೆ. ಸಿಪಿಎಂ 43 ಕಡೆ, ಮಿತ್ರಪಕ್ಷಗಳಾದ ಫಾರ್ವರ್ಡ್ ಬ್ಲಾಕ್, ಆರ್‌ಎಸ್‌ಪಿ, ಸಿಪಿಐ ತಲಾ ಒಂದು ಕ್ಷೇತ್ರದಲ್ಲಿ ಕಣಕ್ಕಿಳಿಯಲಿವೆ.

‘ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆಯಿದ್ದು, ಟಿಪ್ರಮೋಥಾ ನಿರ್ಣಾಯಕ ಪಾತ್ರ ವಹಿಸಲಿದೆ’ ಎಂದು ಪಕ್ಷದ ವಕ್ತಾರ ಆಂಟನಿ ದೇಬಬರ್ಮಾ ಅವರು ಹೇಳಿದ್ದಾರೆ. ಪಕ್ಷವು 42 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಉದ್ದೇಶ ಹೊಂದಿದ್ದು, ಈ ಪೈಕಿ 25–26 ಕ್ಷೇತ್ರಗಳಲ್ಲಿ ಜಯದ ವಿಶ್ವಾಸವಿದೆ ಎಂದು ಅವರು ಹೇಳಿದ್ದಾರೆ. ಟಿಪ್ರಮೋಥಾ ಪ್ರವೇಶದಿಂದ ಬಿಜೆಪಿಗೆ ಹಿನ್ನಡೆ
ಯಾಗಲಿದೆ ಎಂದು ಪತ್ರಕರ್ತ ಹಾಗೂ ರಾಜಕೀಯ ವಿಶ್ಲೇಷಕ ಶೇಖರ್ ದತ್ತಾ ಅಭಿಪ್ರಾಯಪಟ್ಟಿದ್ದಾರೆ. ಆದರೆ, ಪಕ್ಷದ ಶಾಸಕರ ಸಂಖ್ಯೆ ಈ ಬಾರಿ ಇನ್ನಷ್ಟು ಹೆಚ್ಚಲಿದೆ ಎಂದು ಬಿಜೆಪಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.