
ಪೊಲೀಸ್
ಸಾಂದರ್ಭಿಕ ಚಿತ್ರ
ಡೆಹ್ರಾಡೂನ್ (ಪಿಟಿಐ): ತ್ರಿಪುರಾ ವಿದ್ಯಾರ್ಥಿ ಏಂಜಲ್ ಚಕ್ಮಾ ಸಾವಿಗೆ ಜನಾಂಗೀಯ ನಿಂದನೆ ಕಾರಣ ಎಂಬುದಕ್ಕೆ ಯಾವುದೇ ಪುರಾವೆಗಳು ಈವರೆಗೆ ಲಭ್ಯವಾಗಿಲ್ಲ ಎಂದು ಡೆಹ್ರಾಡೂನ್ ಪೊಲೀಸರು ಮಂಗಳವಾರ ತಿಳಿಸಿದರು.
ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಸಿಂಗ್ ಅವರು, ‘ವಿದ್ಯಾರ್ಥಿ ಸಾವಿಗೆ ಜನಾಂಗೀಯ ನಿಂದನೆ ಕಾರಣವಿರಬಹುದು ಎಂಬ ಸಾಮಾಜಿಕ ಜಾಲತಾಣಗಳ ಆರೋಪವನ್ನು ಪರಿಗಣಿಸಿ ಈ ಆಯಾಮದಲ್ಲಿಯೂ ತನಿಖೆ ನಡೆಸಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಈವರೆಗೆ ಯಾವುದೇ ಸಾಕ್ಷ್ಯಗಳು ಲಭ್ಯವಾಗಿಲ್ಲ’ ಎಂದು ತಿಳಿಸಿದರು.
ಡಿಸೆಂಬರ್ 9ರಿಂದ 26ರವರೆಗೆ ಜನಾಂಗೀಯ ನಿಂದನೆಗೆ ಸಂಬಂಧಿಸಿದಂತೆ ಯಾವುದೇ ದೂರು ದಾಖಲಾಗಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾದ ಎಫ್‌ಐಆರ್‌ನಲ್ಲೂ ಈ ಅಂಶ ಉಲ್ಲೇಖಿಸಿಲ್ಲ ಎಂದು ಹೇಳಿದರು.
ಡಿಸೆಂಬರ್ 9ರಂದು ಆರೋಪಿಗಳ ಪೈಕಿ ಮಣಿಪುರದ ನಿವಾಸಿ ಸೂರಜ್ ಖ್ವಾಸ್ ಎಂಬಾತ ಜನ್ಮ ದಿನದ ಔತಣಕೂಟ ಆಯೋಜಿಸಿದ್ದ. ಮೃತ ವಿದ್ಯಾರ್ಥಿ, ಆತನ ಸಹೋದರ ಇದ್ದ ಒಂದು ಗುಂಪು ಮತ್ತು ಆರು ಜನರಿದ್ದ ಇನ್ನೊಂದು ಗುಂಪಿನ ಮಧ್ಯೆ ವಾದ–ಪ್ರತಿವಾದ ನಡೆದಿತ್ತು. ಸಂಘರ್ಷವು ಅತಿರೇಕಕ್ಕೆ ತಲುಪಿ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆದಿತ್ತು. ತೀವ್ರ ಗಾಯಗೊಂಡಿದ್ದ ವಿದ್ಯಾರ್ಥಿ ಮೃತಪಟ್ಟಿದ್ದ’ ಎಂದರು.
ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾದ ಆರು ಆರೋಪಿಗಳ ಪೈಕಿ ಐವರನ್ನು ವಶಕ್ಕೆ ಪಡೆಯಲಾಗಿದೆ. ಈ ಪೈಕಿ ಕಾನೂನು ಸಂಘರ್ಷಕ್ಕೆ ಒಳಪಟ್ಟ ಇಬ್ಬರು ಬಾಲಕರನ್ನು ಬಾಲ ಮಂದಿರಕ್ಕೆ ಕಳುಹಿಸಲಾಗಿದೆ. ಮೂವರನ್ನು ನ್ಯಾಯಾಂಗದ ವಶಕ್ಕೆ ನೀಡಲಾಗಿದೆ. ತಲೆಮರೆಸಿಕೊಂಡ ಆರೋಪಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ವಲಸೆ ಕಾರ್ಮಿಕ ಮೇಲೆ ದಾಳಿ: ಪ್ರಧಾನಿಗೆ ಚೌಧರಿ ಪತ್ರ
ನವದೆಹಲಿ: ‘ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕರನ್ನು ಬಾಂಗ್ಲಾದೇಶದ ಒಳನುಸುಳು ಕೋರರು ಎಂದು ಭಾವಿಸಿ ಹತ್ಯೆ ಮಾಡಲಾಗುತ್ತಿದೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲೇ ಇಂಥ ಪ್ರಕರಣಗಳು ನಡೆಯುತ್ತಿವೆ’ ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಂಗಳವಾರ ಭೇಟಿ ಮಾಡಿ ಪತ್ರ ನೀಡಿದರು.
‘ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕರು ತಾರತಮ್ಯ, ಹಿಂಸೆ, ದ್ವೇಷ, ದೌರ್ಜನ್ಯವನ್ನು ಎದುರಿಸುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಅವರನ್ನು ಹೊಡೆದು ಕೊಲ್ಲಲಾಗುತ್ತಿದೆ. ಬಂಗಾಳಿ ಭಾಷೆ ಮಾತನಾಡುತ್ತಾರೆ ಎನ್ನುವ ಕಾರಣಕ್ಕೆ ಅವರನ್ನು ಬಾಂಗ್ಲಾದೇಶದವರು ಎಂದು ತಪ್ಪಾಗಿ ಭಾವಿಸಲಾಗುತ್ತಿದೆ’ ಎಂದು ಪತ್ರದಲ್ಲಿ ಹೇಳಿದ್ದಾರೆ.