ADVERTISEMENT

ಟಿಆರ್‌ಪಿ ಹಗರಣ: ಇಂಡಿಯಾ ಟುಡೇ ಗ್ರೂಪ್‌ನ ಹಣಕಾಸು ಅಧಿಕಾರಿಗೆ ಇ.ಡಿ ಸಮನ್ಸ್‌

ಏಜೆನ್ಸೀಸ್
Published 8 ಜನವರಿ 2021, 15:40 IST
Last Updated 8 ಜನವರಿ 2021, 15:40 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಮುಂಬೈ: ಟೆಲಿವಿಷನ್ ರೇಟಿಂಗ್ ಪಾಯಿಂಟ್ಸ್ (ಟಿಆರ್‌ಪಿ) ಹಗರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ದಾಖಲಿಸಿಕೊಳ್ಳಲು ಇಂಡಿಯಾ ಟುಡೇ ಗ್ರೂಪ್‌ನ ಮುಖ್ಯ ಹಣಕಾಸು ಅಧಿಕಾರಿಗೆ ಜಾರಿ ನಿರ್ದೇಶನಾಲಯವು (ಇ.ಡಿ) ಸಮನ್ಸ್‌ ಜಾರಿ ಮಾಡಿದೆ.

ಈ ವಿಚಾರವಾಗಿ ಪಿಟಿಐಗೆ ಮಾಹಿತಿ ನೀಡಿರುವ ಜಾರಿ ನಿರ್ದೇಶನಾಲಯದ ಹಿರಿಯ ಅಧಿಕಾರಿಯೊಬ್ಬರು, 'ಅಕ್ರಮ ಹಣ ವರ್ಗಾವಣೆಯ ಆರೋಪದ ಅಡಿಯಲ್ಲಿ ಮುಂಬೈ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಇದರ ಆಧಾರದ ಮೇಲೆ ಸಂಸ್ಥೆಯು ಇಸಿಐಆರ್ (ಜಾರಿ ಪ್ರಕರಣ ಮಾಹಿತಿ ವರದಿ) ಅನ್ನು ದಾಖಲಿಸಿಕೊಂಡಿದೆ. ಇಸಿಐಆರ್ ಎಂಬುದು ಪೊಲೀಸ್ ಎಫ್‌ಐಆರ್‌ಗೆ ಸಮನಾಗಿರುತ್ತದೆ' ಎಂದು ತಿಳಿಸಿದ್ದಾರೆ.

ಪ್ರಸ್ತುತ ಟಿಆರ್‌ಪಿ ಲೆಕ್ಕಾಚಾರ ನಡೆಸುತ್ತಿರುವ ಬಾರ್ಕ್‌ ಸಂಸ್ಥೆಯು ಹಂಸ ರಿಸರ್ಚ್‌ ಗ್ರೂಪ್‌ ಪ್ರೈ.ಲಿ., ಮೂಲಕ ಟಿಆರ್‌ಪಿ ಹಗರಣದ ಸಂಬಂಧ ಪೊಲೀಸರಿಗೆ ದೂರು ದಾಖಲಿಸಿತ್ತು.

ADVERTISEMENT

ಟಿಆರ್‌ಪಿ ಹಗರಣದ ಸಂಬಂಧ ಮುಂಬೈ ಪೊಲೀಸರು ಪ್ರಸಾರ ವೀಕ್ಷಕ ಸಂಶೋಧನಾ ಮಂಡಳಿಯ (ಬಿಎಆರ್‌ಸಿ–ಬಾರ್ಕ್‌) ಮಾಜಿ ಮುಖ್ಯ ನಿರ್ವಹಣಾಧಿಕಾರಿ ರೊಮಿಲ್‌ ರಾಮ್‌ಗರ‍್ಹಿಯಾ ಅವರನ್ನು ಬಂಧಿಸಿದ್ದರು.

ಹಗರಣದಲ್ಲಿ ಇವರ ಪಾತ್ರವೂ ಇರುವುದು ತಿಳಿದುಬಂದಿತ್ತು. ಹೀಗಾಗಿ, ಬಂಧಿಸಲಾಗಿದ್ದು, ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದರು.

ರಿಪಬ್ಲಿಕ್‌ ಮೀಡಿಯಾ ನೆಟ್‌ವರ್ಕ್‌ನ ಸಿಇಒ ವಿಕಾಸ್‌ ಖಾನ್‌ಚಂದಾನಿರನ್ನು ಬಂಧಿಸಿದ್ದ ಮುಂಬೈ ಪೊಲೀಸರು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು.

ಕಾರ್ಯಕ್ರಮಗಳ ವೀಕ್ಷಣೆಯ ಶ್ರೇಣಿ ನಿಗದಿಪಡಿಸಲು ಆಯ್ದ ಮನೆಗಳಲ್ಲಿ ಮಾಪಕಗಳನ್ನು ಅಳವಡಿಸಲು ಬಿಎಆರ್‌ಸಿ ಹಂಸಾ ಸಂಸ್ಥೆಯನ್ನು ನಿಯೋಜಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.