ADVERTISEMENT

ಭಾರತ– ಅಮೆರಿಕ ಸಂಬಂಧ ಹೇಳಿಕೆ | ಟ್ರಂಪ್‌ ಭಾವನೆ ಗೌರವಿಸುವೆ ಎಂದ ಮೋದಿ

ಅಮೆರಿಕ ಅಧ್ಯಕ್ಷರ ‘ಆಪ್ತ ಸ್ನೇಹಿತ’ ಹೇಳಿಕೆಗೆ ಮೋದಿ ಪ್ರತಿಕ್ರಿಯೆ

ಪಿಟಿಐ
Published 6 ಸೆಪ್ಟೆಂಬರ್ 2025, 23:30 IST
Last Updated 6 ಸೆಪ್ಟೆಂಬರ್ 2025, 23:30 IST
ಮೋದಿ ಹಾಗೂ ಟ್ರಂಪ್ –ಸಂಗ್ರಹ ಚಿತ್ರ
ಮೋದಿ ಹಾಗೂ ಟ್ರಂಪ್ –ಸಂಗ್ರಹ ಚಿತ್ರ   

ನವದೆಹಲಿ/ ವಾಷಿಂಗ್ಟನ್: ‘ಭಾರತ– ಅಮೆರಿಕ ಸಂಬಂಧದ ಬಗ್ಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೀಡಿರುವ ಸಕಾರಾತ್ಮಕ ಹೇಳಿಕೆಯನ್ನು ಶ್ಲಾಘಿಸುತ್ತೇನೆ’ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.

ಭಾರತ–ಅಮೆರಿಕ ನಡುವೆ ‘ವಿಶೇಷ ಸಂಬಂಧ’ ಇದೆ ಎಂದು ಟ್ರಂಪ್‌ ಹೇಳಿದ್ದಕ್ಕೆ, ಮೋದಿ ಈ ಪ್ರತಿಕ್ರಿಯೆ ನೀಡಿದ್ದಾರೆ. ಭಾರತದ ಸರಕುಗಳ ಮೇಲೆ ಹೆಚ್ಚಿನ ಸುಂಕ ವಿಧಿಸುವ ಟ್ರಂಪ್‌ ನಿರ್ಧಾರವು ಉಭಯ ದೇಶಗಳ ನಡುವಣ ಸಂಬಂಧಕ್ಕೆ ಧಕ್ಕೆ ಉಂಟುಮಾಡಿತ್ತು. ಇದೀಗ ಇಬ್ಬರೂ ನಾಯಕರು ನೀಡಿರುವ ಹೇಳಿಕೆಗಳು ಸಂಬಂಧವನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ನಡೆದಿರುವ ಪ್ರಯತ್ನ ಎಂದು ವಿಶ್ಲೇಷಿಸಲಾಗಿದೆ.‌

ಭಾರತ ಮತ್ತು ಅಮೆರಿಕವು ಅತ್ಯಂತ ಸಕಾರಾತ್ಮಕ, ಭವಿಷ್ಯಕ್ಕೆ ಒಳ್ಳೆಯದಾಗುವ ಹಾಗೂ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ಹೊಂದಿವೆ ಎಂದು ಪ್ರಧಾನಿ ಅವರು ‘ಎಕ್ಸ್‌’ನಲ್ಲಿ ಪ್ರತಿಕ್ರಿಯಿಸಿದ್ದಾರೆ.

ADVERTISEMENT

‘ನಾನು ಯಾವಾಗಲೂ ಮೋದಿ ಅವರ ಸ್ನೇಹಿತನಾಗಿಯೇ ಇರುತ್ತೇನೆ. ಅವರೊಬ್ಬ ಗೌರವಾನ್ವಿತ ವ್ಯಕ್ತಿ ಮತ್ತು ಶ್ರೇಷ್ಠ ಪ್ರಧಾನಿ. ಆದರೆ, ಈ ನಿರ್ದಿಷ್ಟ ಕ್ಷಣದಲ್ಲಿ ಅವರು ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ನನಗೆ ಇಷ್ಟವಾಗುತ್ತಿಲ್ಲ. ಈಗ ತಲೆದೋರಿರುವ ಬಿಕ್ಕಟ್ಟು ಶೀಘ್ರದಲ್ಲೇ ಸರಿ ಹೋಗಲಿದೆ’ ಎಂದು ಟ್ರಂಪ್‌ ಅವರು ಶುಕ್ರವಾರ ಓವಲ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಭಾರತ ಜತೆ ತಲೆದೋರಿರುವ ಬಿಕ್ಕಟ್ಟನ್ನು ಅಮೆರಿಕವು ಬಗೆಹರಿಸುವ ಸಾಧ್ಯತೆಯ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಎರಡೂ ರಾಷ್ಟ್ರಗಳು ವಿಶೇಷ ಸಂಬಂಧ’ ಹೊಂದಿವೆ ಎಂದಿದ್ದಾರೆ.

ಜೂನ್ 17ರಂದು ದೂರವಾಣಿ ಸಂಭಾಷಣೆ ನಡೆಸಿದ ನಂತರ ಉಭಯ ದೇಶಗಳ ನಾಯಕರು ತಮ್ಮ ನಡುವಿನ ಅಭಿಪ್ರಾಯ ವಿನಿಮಯ ಮಾಡಿಕೊಂಡಿರುವುದು ಇದೇ ಮೊದಲು.

ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಅಮೆರಿಕವು ಶೇ 50ರಷ್ಟು ಸುಂಕ ವಿಧಿಸಿದ ಬಳಿಕ ಉಭಯ ದೇಶಗಳ ನಡುವಣ ಬಾಂಧವ್ಯ ಕುಸಿತದ ಹಾದಿ ಹಿಡಿದಿದೆ. ಭಾರತವು ರಷ್ಯಾದಿಂದ ತೈಲ ಖರೀದಿ ಮುಂದುವರಿಸಿರುವುದಕ್ಕೆ ಪ್ರತಿಯಾಗಿ ಅಮೆರಿಕವು ಹೆಚ್ಚಿನ ಸುಂಕ ವಿಧಿಸುವ ನಿರ್ಧಾರ ತೆಗೆದುಕೊಂಡಿದೆ. ಟ್ರಂಪ್‌ ಆಡಳಿತದ ನಿರ್ಧಾರವನ್ನು ಭಾರತ, ‘ಅನ್ಯಾಯ ಮತ್ತು ಅಸಮಂಜಸ ಕ್ರಮ’ ಎಂದು ಟೀಕಿಸಿತ್ತು.

ಭಾರತ ಮತ್ತು ಅಮೆರಿಕ ನಡುವಣ ಸಂಬಂಧ ತುಂಬಾ ವಿಶೇಷವಾದುದು. ನಮ್ಮಿಬ್ಬರ ಬಾಂಧವ್ಯ ಹದಗೆಟ್ಟಿರುವುದರ ಬಗ್ಗೆ ಚಿಂತೆ ಮಾಡುವಂತದ್ದು ಏನೂ ಇಲ್ಲ 
ಡೊನಾಲ್ಡ್‌ ಟ್ರಂಪ್ ಅಮೆರಿಕದ ಅಧ್ಯಕ್ಷ
ಅಮೆರಿಕದ ಅಧ್ಯಕ್ಷ ಟ್ರಂಪ್ ಅವರ ಭಾವನೆಗಳು ಮತ್ತು ಭಾರತದ ಜತೆಗಿನ ಬಾಂಧವ್ಯದ ಕುರಿತು ನೀಡಿರುವ ಸಕಾರಾತ್ಮಕ ಹೇಳಿಕೆಯನ್ನು ಪ್ರಶಂಸಿಸುತ್ತೇನೆ
ನರೇಂದ್ರ ಮೋದಿ ಪ್ರಧಾನಿ

ತುಂಬಾ ನಿರಾಸೆಯಾಗಿದೆ: ಟ್ರಂಪ್ 

‘ಭಾರತವು ರಷ್ಯಾದಿಂದ ದೊಡ್ಡ ಪ್ರಮಾಣದಲ್ಲಿ ತೈಲ ಖರೀದಿಸುತ್ತಿರುವುದು ನನಗೆ ತುಂಬಾ ನಿರಾಸೆ ಉಂಟುಮಾಡಿದೆ. ಈ ವಿಚಾರವನ್ನು ಅವರಿಗೂ (ಭಾರತಕ್ಕೆ) ತಿಳಿಸಿದ್ದೇನೆ’ ಎಂದು ಟ್ರಂಪ್‌ ಹೇಳಿದ್ದಾರೆ.  ‘ನಾವು ಭಾರತ ಮತ್ತು ರಷ್ಯಾವನ್ನು ಚೀನಾಕ್ಕೆ ಕಳೆದುಕೊಂಡಂತೆ ಭಾಸವಾಗುತ್ತಿದೆ’ ಎಂದು ಸಾಮಾಜಿಕ ಮಾಧ್ಯಮದಲ್ಲಿ ಮಾಡಿದ್ದ ಪೋಸ್ಟ್‌ ಕುರಿತ ಪ್ರಶ್ನೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ. ‘ಭಾರತದ ಸರಕುಗಳ ಮೇಲೆ ಶೇಕಡ 50ರಷ್ಟು ಸುಂಕ ಹೇರಿದ್ದೇವೆ. ಆದರೆ ಪ್ರಧಾನಿ ಮೋದಿ ಅವರೊಂದಿಗೆ ನಾನು ಒಳ್ಳೆಯ ಸಂಬಂಧ ಹೊಂದಿದ್ದೇನೆ. ಕೆಲ ತಿಂಗಳ ಹಿಂದೆ ಅವರು ಅಮೆರಿಕಕ್ಕೆ ಭೇಟಿ ನೀಡಿದ್ದರು. ರೋಸ್‌ ಗಾರ್ಡನ್‌ನಲ್ಲಿ ಇಬ್ಬರೂ ಸುದ್ದಿಗೋಷ್ಠಿ ನಡೆಸಿದ್ದೆವು’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.