
ನವದೆಹಲಿ: ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನ ನಡುವಿನ ಯುದ್ಧದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಕಿಸ್ತಾನಕ್ಕೆ ಸಂಪೂರ್ಣ ಬೆಂಬಲ ಘೋಷಿಸಿರುವುದು ಸ್ವಯಂ ಘೋಷಿತ ವಿಶ್ವಗುರು ಪ್ರಧಾನಿ ನರೇಂದ್ರ ಮೋದಿಗೆ ಹಿನ್ನಡೆಯಾಗಿದೆ ಎಂದು ಕಾಂಗ್ರೆಸ್ ಶನಿವಾರ ಟೀಕಿಸಿದೆ.
ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಪಹಲ್ಗಾಮ್ ಮೇಲಿನ ದಾಳಿಗೆ ಸಂಚು ಹಾಗೂ ಉಗ್ರ ಪ್ರಚೋದನಾತ್ಮಕ ಹೇಳಿಕೆ ನೀಡಿದ ಪಾಕಿಸ್ತಾನ ಸೇನಾ ಮುಖ್ಯಸ್ಥ ಜ. ಆಸಿಮ್ ಮುನೀರ್‌ನನ್ನು ಟ್ರಂಪ್ ಮತ್ತೆ ಪ್ರಶಂಸಿಸಿದ್ದಾರೆ. ಹಾಗೂ ಅಫ್ಗಾನಿಸ್ತಾನ ವಿರುದ್ಧದ ಯುದ್ಧದಲ್ಲಿ ಪಾಕಿಸ್ತಾನಕ್ಕೆ ಟ್ರಂಪ್ ಬೆಂಬಲ ಸೂಚಿಸಿರುವುದು ದೇಶದ ರಾಜತಾಂತ್ರಿಕ ವ್ಯವಸ್ಥೆಗೆ ಹಿನ್ನಡೆಯಾಗಿದೆ ಎಂದು ಜೈರಾಮ್ ರಮೇಶ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಭಾರತ ಮತ್ತು ಅಮೆರಿಕ ನಡುವಿನ ವಾಣಿಜ್ಯ ಒಪ್ಪಂದ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದ ಅವರು, ಏಕಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಪ್ರಧಾನಿ ಮೋದಿ ಶರಣಾಗಿದ್ದಾರೆ. ವಿಶೇಷವಾಗಿ ಅಮೆರಿಕದ ರೈತರಿಂದ ಆಮದು ಹೆಚ್ಚಿಸಲು ಭಾರತ ಸಹಕಾರ ನೀಡಿದೆ ಆದರೆ ಭಾರತದಿಂದ ಹೆಚ್ಚಿನ ರಫ್ತಿಗೆ ಅವಕಾಶ ನೀಡುವುದಾಗಿ ಅಮೆರಿಕ ನೀಡಿರುವುದು ಅಸ್ಪಷ್ಟ ಭರವಸೆ ಮಾತ್ರ ಎಂದು ಜೈರಾಮ್ ರಮೇಶ್ ಟೀಕಿಸಿದರು.
ಒಪ್ಪಂದವಾದ ಕೆಲವೇ ದಿನಗಳಲ್ಲಿ ಅಮೆರಿಕವು ಭಾರತದಿಂದ ಆಮದು ಮಾಡುವ ಸೋಲಾರ್ ಮಾಡ್ಯೂಲ್‌ಗಳ ಮೇಲೆ ಶೇ.125.87ರಷ್ಟು ಆಮದು ಸುಂಕ ವಿಧಿಸಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
ಅಮೆರಿಕ ಅಧ್ಯಕ್ಷರು ಪಾಕಿಸ್ತಾನಕ್ಕೆ ಹತ್ತಿರವಾಗುತ್ತ, ಭಾರತ–ಪಾಕಿಸ್ತಾನ ಸಂಬಂಧವನ್ನು ಮತ್ತೆ ಜೋಡಿಸುವ ದೃಷ್ಟಿಕೋನದಲ್ಲಿ ಭಾರತವನ್ನು ನೋಡುತ್ತಿದ್ದಾರೆ. ಆದರೆ ಇದು ದೇಶದ ರಾಜತಾಂತ್ರಿಕತೆಗೆ ಮರು ಹೊಡೆತ ನೀಡುತ್ತಿದೆ ಎಂದು ರಮೇಶ್ ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.