ADVERTISEMENT

ಜ.6ರ ಹಿಂಸಾಚಾರಕ್ಕೆ ಡೊನಾಲ್ಡ್‌ ಟ್ರಂಪ್‌ ಪ್ರಚೋದನೆ ನೀಡಿಲ್ಲ: ಟ್ರಂಪ್‌ ಪರ ವಕೀಲ

ಪಿಟಿಐ
Published 13 ಫೆಬ್ರುವರಿ 2021, 6:52 IST
Last Updated 13 ಫೆಬ್ರುವರಿ 2021, 6:52 IST
ಬ್ರೂಸ್‌ ಕ್ಯಾಸ್ಟರ್‌
ಬ್ರೂಸ್‌ ಕ್ಯಾಸ್ಟರ್‌   

ವಾಷಿಂಗ್ಟನ್‌: ‘ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ಧ ಮಂಡಿಸಲಾಗಿರುವ ವಾಗ್ದಂಡನೆ ನಿರ್ಣಯದಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿದೆ. ಟ್ರಂಪ್‌, ಕಾನೂನು ಸುವ್ಯವಸ್ಥೆ ಕಾಪಾಡಲು ಬದ್ಧರಾಗಿದ್ದರು. ಅವರ ಭಾಷಣದಿಂದಾಗಿ ಜನವರಿ 6ರಂದು ಕ್ಯಾಪಿಟಲ್‌ ಹಿಲ್‌ ಮೇಲೆ ದಾಳಿ ನಡೆದಿಲ್ಲ’ ಎಂದು ಟ್ರಂ‍‍ಪ್‌ ಪರ ವಕೀಲರು ಶುಕ್ರವಾರ ಸೆನೆಟ್‌ಗೆ ತಿಳಿಸಿದ್ದಾರೆ.

‘ಟ್ರಂಪ್‌ ವಿರುದ್ಧ ಮಂಡಿಸಿರುವ ವಾಗ್ದಂಡನೆ ನಿರ್ಣಯದಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿದೆ. ರಾಜಕೀಯ ಎದುರಾಳಿಯ ನಿರ್ಮೂಲನೆ ಅವರ ಗುರಿಯಾಗಿದೆ’ ಎಂದು ಟ್ರಂಪ್‌ ಪರ ವಕೀಲ ಬ್ರೂಸ್‌ ಕ್ಯಾಸ್ಟರ್‌ ಅವರು ವಾದಿಸಿದರು.

‘ಅಮೆರಿಕದ 45ನೇ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ದಂಗೆಗೆ ಪ್ರಚೋದನೆ ನೀಡಿದ್ದಾರೆಯೇ ಎಂಬುದು ಪ್ರಶ್ನೆಯಾಗಿದೆ. ಆದರೆ ಅಮೆರಿಕದಲ್ಲಿ ಈ ರೀತಿಯ ದಂಗೆ ನಡೆದಿಲ್ಲ’ ಎಂದು ಅವರು ಹೇಳಿದರು.

ADVERTISEMENT

‘ಜನವರಿ 6 ರಂದು ನಡೆದ ದಾಳಿಯು ಪೂರ್ವ ಯೋಜಿತವಾಗಿದೆ ಎಂಬುದನ್ನು ಎಫ್‌ಬಿಐ, ನ್ಯಾಯಾಂಗ ಇಲಾಖೆ ಮತ್ತು ಹಲವಾರು ಅಧಿಕಾರಿಗಳ ವರದಿಯು ಹೇಳಿತ್ತು. ಹೀಗಿರುವಾಗ ಡೊನಾಲ್ಡ್‌ ಟ್ರಂಪ್‌ ಅವರ ಭಾಷಣದಿಂದಾಗಿ ಕ್ಯಾಪಿಟಲ್‌ ಹಿಲ್‌ ಮೇಲೆ ದಾಳಿ ನಡೆದಿದೆ ಎಂಬುದನ್ನು ನಂಬಲು ಸಾಧ್ಯವಿಲ್ಲ. ಅವರ ಭಾಷಣದಿಂದಾಗಿ ಯಾವುದೇ ಗಲಭೆ ನಡೆದಿಲ್ಲ. ಅವರು ಯಾವ ಕಾರಣಕ್ಕೂ ಹಿಂಸಾತ್ಮಕ ಮತ್ತು ಕಾನೂನಿನ ವಿರುದ್ಧ ನಡೆದುಕೊಳ್ಳಲು ಪ್ರಚೋದನೆ ನೀಡಿಲ್ಲ. ಬದಲಿಗೆ ಶಾಂತಿಯುತವಾಗಿ ನ್ಯಾಯದ ಮೊರೆ ಹೋಗುವಂತೆ ಕರೆ ನೀಡಿದ್ದರು’ ಎಂದು ಕ್ಯಾಸ್ಟರ್‌ ಅವರು ಸೆನೆಟ್‌ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.