ADVERTISEMENT

ದುರಹಂಕಾರಿ, ಸರ್ವಾಧಿಕಾರಿ ಸರ್ಕಾರದ ವಿರುದ್ಧ ಸತ್ಯಕ್ಕೆ ಜಯ ಸಿಗಲಿದೆ: ರಾಹುಲ್

ಪಿಟಿಐ
Published 21 ಜುಲೈ 2022, 10:51 IST
Last Updated 21 ಜುಲೈ 2022, 10:51 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ   

ನವದೆಹಲಿ: ದುರಹಂಕಾರಿ ಹಾಗೂ ಸರ್ವಾಧಿಕಾರಿ ಸರ್ಕಾರದ ಧೋರಣೆಯ ವಿರುದ್ಧ ಸತ್ಯಕ್ಕೆ ಜಯ ಸಿಗಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಪ್ರತಿಪಾದಿಸಿದ್ದಾರೆ.

ಸಂಸತ್ ಅಧಿವೇಶನದಲ್ಲಿ ಬೆಲೆ ಏರಿಕೆ, ಅಗತ್ಯ ವಸ್ತುಗಳ ಮೇಲೆ ಜಿಎಸ್‌ಟಿ ಹೇರಿಕೆ, ತನಿಖಾ ಸಂಸ್ಥೆಗಳ ದುರ್ಬಳಕೆ ಮುಂತಾದ ವಿಷಯಗಳ ಬಗ್ಗೆ ಚರ್ಚಿಸಲು ಸಿದ್ಧರಿಲ್ಲದ ಕೇಂದ್ರ ಸರ್ಕಾರದ ವಿರುದ್ದ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ರಾಹುಲ್, ಜಿಎಸ್‌ಟಿ ವಿಷಯದಲ್ಲಿ ಚರ್ಚೆ ಮಾಡಿ ಎಂದು ಮನವಿ ಮಾಡಿದಾಗ ಸದನ ಮುಂದೂಡಲಾಗುತ್ತದೆ. ಬೆಲೆ ಏರಿಕೆ ಬಗ್ಗೆ ಚರ್ಚಿಸಲು ಹೇಳಿದಾಗ ಕಲಾಪ ಮುಂದೂಡಲಾಗುತ್ತದೆ. ಅಗ್ನಿಪಥ ಯೋಜನೆ ಬಗ್ಗೆ ಚರ್ಚಿಸಲು ತಿಳಿಸಿದಾಗ ಸದನ ಮುಂದೂಡಲಾಗುತ್ತದೆ. ಏಜೆನ್ಸಿಗಳ ದುರುಪಯೋಗದ ಬಗ್ಗೆ ಚರ್ಚೆ ಮಾಡಲು ಮನವಿ ಮಾಡಿದಾಗ ಸದನ ಮುಂದೂಡಲಾಗುತ್ತದೆ ಎಂದು ಆರೋಪಿಸಿದ್ದಾರೆ.

ದೇಶದ ಜನಸಾಮಾನ್ಯರ ಧ್ವನಿಯನ್ನು ದಮನ ಮಾಡಲಾಗುತ್ತಿದೆ. ಈ ದುರಹಂಕಾರಿ ಹಾಗೂ ಸರ್ವಾಧಿಕಾರಿ ಸರ್ಕಾರದ ವಿರುದ್ಧ ಸತ್ಯಕ್ಕೆ ಜಯ ಸಿಗಲಿದೆ ಎಂದು ಹೇಳಿದ್ದಾರೆ.

ನ್ಯಾಷನಲ್ ಹೆರಾಲ್ಡ್‌ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಗುರುವಾರ ವಿಚಾರಣೆ ನಡೆಸಿದ್ದಾರೆ.

ಇದನ್ನು ಪ್ರತಿಭಟಿಸಿ ಕಾಂಗ್ರೆಸ್ ದೇಶದಾದ್ಯಂತ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ. ಸದನದಲ್ಲೂ ಕಾಂಗ್ರೆಸ್ ಪ್ರತಿಭಟನೆ ಕೂಗು ಜೋರಾಗಿದ್ದರಿಂದ ಗುರುವಾರವೂ ಕಲಾಪಕ್ಕೆ ಅಡ್ಡಿಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.