ಹೈದರಾಬಾದ್: ತಿರುಪತಿಗೆ ಭೇಟಿ ನೀಡುವ ಯಾತ್ರಿಗಳ ಅನುಕೂಲಕ್ಕಾಗಿ ತಿರುಮಲ ತಿರುಪತಿ ದೇವಸ್ಥಾನವು (ಟಿಟಿಡಿ) ಕೃತಕ ಬುದ್ಧಮತ್ತೆ (ಎಐ) ಆಧಾರಿತ ಮುಖ ಗುರುತಿಸುವಿಕೆ (ಎಫ್.ಆರ್) ಕ್ಯಾಮೆರಾಗಳನ್ನು ಅಳವಡಿಸಲು ಯೋಜಿಸಿದೆ.
ತಿರುಮಲದಲ್ಲಿರುವ ಶ್ರೀ ವೆಂಕಟೇಶ್ವರ ದೇಗುಲಕ್ಕೆ ನಿತ್ಯ 70ರಿಂದ 80 ಸಾವಿರ ಯಾತ್ರಿಕರು ಬರುತ್ತಾರೆ. ವಿಶೇಷ ಸಂದರ್ಭಗಳಲ್ಲಿ ಈ ಸಂಖ್ಯೆ ಒಂದು ಲಕ್ಷವನ್ನು ದಾಟುತ್ತದೆ.
ಯಾತ್ರಿಕರಿಗೆ ಉತ್ತಮ ಸೇವೆ ಒದಗಿಸಲು ಎಐ ಸೇರಿದಂತೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಟಿಟಿಡಿ ಉದ್ದೇಶಿಸಿದೆ. ಅವುಗಳ ಕಾರ್ಯಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಟಿಟಿಡಿಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಯಾತ್ರಿಕರ ಮುಖ ಗುರುತಿಸುವಿಕೆ (ಎಫ್‌ಆರ್) ಮೂಲಕ ದರ್ಶನಕ್ಕೆ ಸಮಯ (ಸ್ಲಾಟ್) ನಿಗದಿ ಮಾಡಿ ಸರ್ವ ದರ್ಶನದ ಟೋಕನ್‌ಗಳನ್ನು ಒದಗಿಸುವ ಪ್ರಸ್ತಾವ ಇದೆ. ಇದರಿಂದ ನಕಲು ಬುಕಿಂಗ್‌ಗಳನ್ನು ತಡೆಯಬಹುದು ಮತ್ತು ಯಾತ್ರಿಕರಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ಸೇವೆ ಸಲ್ಲಿಸಬಹುದು.
ಅಲ್ಲದೆ, ಈ ಅತ್ಯಾಧುನಿಕ ಕ್ಯಾಮೆರಾಗಳಿಂದ ಯಾತ್ರಿಕರ ನೈಜ ಸಂಖ್ಯೆ ಲೆಕ್ಕಕ್ಕೆ ಸಿಗುತ್ತದೆ. ಆ ಮೂಲಕ ಜನದಟ್ಟಣೆಯ ನಿರ್ವಹಣೆಯನ್ನು ಸಕ್ರಿಯವಾಗಿ ನಡೆಸಲು ಸಾಧ್ಯವಾಗುತ್ತದೆ. ಯಾತ್ರಿಕರಿಗೆ ದರ್ಶನದ ಸಮಯವನ್ನು ನಿಖರವಾಗಿ ನಿರ್ಣಯಿಸಲು ಸಾಧ್ಯವಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.