ADVERTISEMENT

ಟಿಟಿಡಿ ಭೂಮಿ ಹಸ್ತಾಂತರಕ್ಕೆ ನಾಯ್ಡು ಪಿತೂರಿ: ಬಿ.ಕರುಣಾಕರ ರೆಡ್ಡಿ ಆರೋಪ

ಪಿಟಿಐ
Published 24 ಆಗಸ್ಟ್ 2025, 16:23 IST
Last Updated 24 ಆಗಸ್ಟ್ 2025, 16:23 IST
   

ತಿರುಪತಿ: ‘ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಒಡೆತನದ ₹1,500 ಕೋಟಿ ಮೌಲ್ಯದ ಭೂಮಿಯನ್ನು ಒಬಿರಾಯ್‌ ಹೋಟೆಲ್ಸ್‌ಗೆ ಹಸ್ತಾಂತರಿಸಲು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಅವರು ಪಿತೂರಿ ರೂಪಿಸಿದ್ದಾರೆ’ ಎಂದು ವೈಎಸ್‌ಆರ್‌ಸಿಪಿ ನಾಯಕ ಬಿ.ಕರುಣಾಕರ ರೆಡ್ಡಿ ಭಾನುವಾರ ಆರೋಪಿಸಿದ್ದಾರೆ. 

‘ಒಬಿರಾಯ್‌ ಹೋಟೆಲ್ಸ್‌ನ ಪ್ರಸ್ತಾವವನ್ನು ಈ ಹಿಂದೆ ತಿರಸ್ಕರಿಸಿದ್ದ ನಾಯ್ಡು, ಈಗ ಕಡಿಮೆ ಮೌಲ್ಯದ ಗ್ರಾಮೀಣ ಭೂಮಿಯನ್ನು ಪಡೆಯಲು ಪರ್ಯಾಯವಾಗಿ ಟಿಟಿಡಿಯ 20 ಎಕರೆ ಭೂಮಿಯನ್ನು ಒಬೆರಾಯ್‌ ಸಂಸ್ಥೆಗೆ ನೀಡಲು ಮುಂದಾಗಿದ್ದಾರೆ. ಇದರಿಂದ ₹1000 ಕೋಟಿ ನಷ್ಟವಾಗಲಿದೆ. ಪರ್ಯಾಯ ಭೂಮಿಯ ಸೋಗಿನಲ್ಲಿ ನಡೆಯುತ್ತಿರುವ ಈ ಪಿತೂರಿಗೆ ನಾಯ್ಡು ಅವರೇ ರೂವಾರಿ’ ಎಂದೂ ರೆಡ್ಡಿ ದೂರಿದ್ದಾರೆ. 

ಅಲ್ಲದೇ, ಟಿಡಿಪಿ ಸರ್ಕಾರವು ದೇವಾಲಯದ ಭೂಮಿಯನ್ನು ‘ಇನಾಂ ಭೂಮಿ’ ಎಂದು ಪರಿಗಣಿಸುವಂತೆ ಮಾಡಲು ಉದ್ದೇಶಪೂರ್ವಕವಾಗಿ ಅವುಗಳ ಮೌಲ್ಯಮಾಪನವನ್ನು ಕೈಬಿಟ್ಟಿದೆ. ಯೋಜನೆಗಳಿಗೆ ಸೂಕ್ತವಾಗುವಂತೆ ಹಲವು ಸಾರ್ವಜನಿಕ ಭೂಮಿ ಲಭ್ಯವಿದ್ದರೂ ದೇವಾಲಯದ ಭೂಮಿಗಳನ್ನೇ ಸರ್ಕಾರ ಏಕೆ ಆಯ್ಕೆ ಮಾಡುತ್ತಿದೆ ಎಂದು ರೆಡ್ಡಿ ಪ್ರಶ್ನಿಸಿದ್ದಾರೆ.

ADVERTISEMENT

ಜತೆಗೆ ಇದು ಹಗಲು ದರೋಡೆ, ಪ್ರವಾಸೋದ್ಯಮದ ಹೆಸರಿನಲ್ಲಿ ಹಿಂದೂ ಧರ್ಮದ ಮೇಲೆ ನಡೆಸಲಾಗುತ್ತಿರುವ ದಾಳಿ ಎಂದಿರುವ ಅವರು, ಸರ್ಕಾರ ತನ್ನ ಆದೇಶವನ್ನು ಹಿಂಪಡೆವಂತೆ ಭಕ್ತರು ಆಗ್ರಹಿಸಬೇಕು ಎಂದು ಕರೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.