ತಿರುಪತಿ: ‘ವಿಶೇಷ ದರ್ಶನ, ವಸತಿ ಸೇರಿದಂತೆ ಶ್ರೀಕ್ಷೇತ್ರದಲ್ಲಿನ ಸೇವೆಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಮಧ್ಯವರ್ತಿಗಳ ಜಾಲಕ್ಕೆ ಸಿಲುಕಿ ಮೋಸ ಹೋಗದಿರಿ’ ಎಂದು ತಿರುಮಲ ತಿರುಪತಿ ದೇವಸ್ಥಾನಂ ಆಡಳಿತ ಮಂಡಳಿಯು ಭಕ್ತರನ್ನು ಎಚ್ಚರಿಸಿದೆ.
‘ಕೆಲವು ಮಧ್ಯವರ್ತಿಗಳು, ಏಜೆಂಟರು ಹಲವು ತಂತ್ರಗಳ ಮೂಲಕ ಶ್ರೀವಾರಿ ದರ್ಶನದ ಸುಳ್ಳು ಭರವಸೆ ನೀಡಿ, ಭಕ್ತರಿಗೆ ಮೋಸ ಮಾಡುತ್ತಿದ್ದಾರೆ’ ಎಂದು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಅಧ್ಯಕ್ಷ ಬಿ.ಆರ್. ನಾಯ್ಡು ಶನಿವಾರ ಹೇಳಿದ್ದಾರೆ.
‘ಶ್ರೀವಾರಿ ದರ್ಶನ, ಅರ್ಜಿತ ಸೇವಾ ಅಥವಾ ವಸತಿಗೆ ಸಂಬಂಧಿಸಿದ ವಿಷಯಗಳಲ್ಲಿ ದಲ್ಲಾಳಿಗಳನ್ನು ನಂಬಬೇಡಿ’ ಎಂದು ನಾಯ್ಡು ಮನವಿ ಮಾಡಿದ್ದಾರೆ ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ.
‘ಟಿಟಿಡಿಯಲ್ಲಿ ಪ್ರಭಾವಿ ಹುದ್ದೆಗಳನ್ನು ಹೊಂದಿದ್ದೇವೆ ಎಂದು ಕೆಲವು ಮಧ್ಯವರ್ತಿಗಳು ಭಕ್ತರನ್ನು ನಂಬಿಸಿ, ಹಣ ಸುಲಿಗೆ ಮಾಡುತ್ತಿರುವ ಪ್ರಕರಣಗಳು ಗೊತ್ತಾಗಿವೆ. ದೇಗುಲದ ಆಡಳಿತ ಮಂಡಳಿಯು ಇಂತಹ ದಲ್ಲಾಳಿಗಳನ್ನು ಗುರುತಿಸಿದ್ದು, ಅವರ ವಿರುದ್ಧ ಕ್ರಮ ಕೈಗೊಂಡಿದೆ’ ಎಂದು ನಾಯ್ಡು ಮಾಹಿತಿ ನೀಡಿದ್ದಾರೆ.
‘ಎಲ್ಲ ಭಕ್ತರು ತಮ್ಮ ಆಧಾರ್ ಕಾರ್ಡ್ ಬಳಸಿಕೊಂಡು ಟಿಟಿಡಿಯ ಅಧಿಕೃತ ವೆಬ್‌ಸೈಟ್ ಅಥವಾ ಮೊಬೈಲ್ ಆ್ಯಪ್ ಮೂಲಕವೇ ತಿರುಪತಿಯಲ್ಲಿನ ಸೇವೆಗಳನ್ನು ಕಾಯ್ದಿರಿಸಿಕೊಳ್ಳಬೇಕು. ದಲ್ಲಾಳಿಗಳ ಕುರಿತು ದೇಗುಲದ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಅಗತ್ಯ ಬಿದ್ದರೆ ಬೇಹುಗಾರಿಕಾ ಅಧಿಕಾರಿಗಳನ್ನು ಸಂಪರ್ಕಿಸಿ’ ಎಂದು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.