ADVERTISEMENT

Karur Stampede: ಸಿಬಿಐ ತನಿಖೆ ಕೋರಿ ಮದ್ರಾಸ್ ಹೈಕೋರ್ಟ್‌ಗೆ ಟಿವಿಕೆ

ಪಿಟಿಐ
Published 28 ಸೆಪ್ಟೆಂಬರ್ 2025, 12:51 IST
Last Updated 28 ಸೆಪ್ಟೆಂಬರ್ 2025, 12:51 IST
<div class="paragraphs"><p>ಮದ್ರಾಸ್ ಹೈಕೋರ್ಟ್‌</p></div>

ಮದ್ರಾಸ್ ಹೈಕೋರ್ಟ್‌

   

ಚೆನ್ನೈ: ಸೆಪ್ಟೆಂಬರ್ 27ರಂದು ಕರೂರಿನಲ್ಲಿ ತಮ್ಮ ಪಕ್ಷ ನಡೆಸಿದ ರ್‍ಯಾಲಿ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 40 ಮಂದಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಥವಾ ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸುವಂತೆ ಒತ್ತಾಯಿಸಿ ಟಿವಿಕೆ ಪಕ್ಷವು ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದೆ.

ಟಿವಿಕೆ ವಕೀಲರ ವಿಭಾಗದ ಅಧ್ಯಕ್ಷ ಎಸ್. ಅರಿವಳಗನ್ ನೇತೃತ್ವದ ವಕೀಲರ ತಂಡವು ಇಲ್ಲಿನ ಗ್ರೀನ್‌ವೇಸ್ ರಸ್ತೆಯಲ್ಲಿರುವ ನ್ಯಾಯಮೂರ್ತಿ ಎಂ.ದಂಡಪಾಣಿ ಅವರ ನಿವಾಸಕ್ಕೆ ತೆರಳಿ ಈ ವಿಷಯವನ್ನು ಪ್ರಸ್ತಾಪಿಸಿತು.

ADVERTISEMENT

ಟಿವಿಕೆ ಪಕ್ಷದ ಸದಸ್ಯ ನಿರ್ಮಲ್ ಕುಮಾರ್ ಅವರ ಪ್ರಕಾರ, ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠದ ಮುಂದೆ ಅರ್ಜಿ ಸಲ್ಲಿಸುವಂತೆ ನ್ಯಾಯಮೂರ್ತಿಗಳು ವಕೀಲರಿಗೆ ಸೂಚಿಸಿದರು. ಈ ಅರ್ಜಿ ಕುರಿತಾದ ವಿಚಾರಣೆ ಸೋಮವಾರ ಮಧ್ಯಾಹ್ನ 2:15 ಕ್ಕೆ ವಿಚಾರಣೆಗೆ ತೆಗೆದುಕೊಳ್ಳಲಾಗುವುದು ಎಂದೂ ತಿಳಿಸಿದ್ದಾರೆ.

ಶನಿವಾರ ಸಂಜೆ ಕರೂರಿನಲ್ಲಿ ನಡೆದ ನಟ, ರಾಜಕಾರಣಿ ವಿಜಯ್ ಅವರ ಟಿವಿಕೆ ಪಕ್ಷದ ರ್‍ಯಾಲಿ ವೇಳೆ ಕಾಲ್ತುಳಿತ ಸಂಭವಿಸಿ 40 ಮಂದಿ ಮೃತಪಟ್ಟಿದ್ದರು.

10 ಸಾವಿರ ಮಂದಿ ಪಾಲ್ಗೊಳ್ಳುವುದಾಗಿ ಹೇಳಿ ರ‍್ಯಾಲಿಗೆ ಅನುಮತಿ ಕೋರಲಾಗಿತ್ತು ಎಂದು ಸರ್ಕಾರಿ ಅಧಿಕಾರಿಗಳು ಸಂಘಟಕರ ವಿರುದ್ಧ ಆರೋಪ ಮಾಡಿದ್ದಾರೆ. ಆದರೆ, ಇದನ್ನು ಅಲ್ಲಗಳೆದಿರುವ ವಿಜಯ್‌ ಅವರ ಬೆಂಬಲಿಗರು, ‘ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರೂ ಭದ್ರತೆಗಾಗಿ ಸಾಕಷ್ಟು ಪ್ರಮಾಣದಲ್ಲಿ ಪೊಲೀಸರನ್ನು ನಿಯೋಜಿಸಿರಲಿಲ್ಲ’ ಎಂದು ದೂರಿದ್ದಾರೆ.

ವಿಜಯ್ ಭಾಷಣ ಮಾಡುವಾಗ ವಿದ್ಯುತ್‌ ಕಡಿತಗೊಂಡಿದ್ದು, ಮೈಕ್ರೊ ಫೋನ್‌ ದೋಷದಿಂದಾಗಿ ಅವರ ಧ್ವನಿ ಕೇಳಿಸದಿರುವುದು ಕಾಲ್ತುಳಿತಕ್ಕೆ ಒಂದು ಕಾರಣ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಈ ಬೆಳವಣಿಗೆಗಳ ನಡುವೆಯೇ ನ್ಯಾಯಮೂರ್ತಿ ಅರುಣಾ ಜಗದೀಶನ್‌ ಸಮಿತಿಯು ದುರಂತದ ಕುರಿತು ಭಾನುವಾರದಿಂದಲೇ ತನಿಖೆ ಆರಂಭಿಸಿದೆ.  

ಮೂವರ ವಿರುದ್ಧ ಪ್ರಕರಣ: 

ಈ ದುರಂತಕ್ಕೆ ಸಂಬಂಧಿಸಿದಂತೆ ಪೊಲೀಸರು ಟಿವಿಕೆ ಮುಖ್ಯಸ್ಥ, ನಟ ವಿಜಯ್‌ ಅವರ ಮೂವರು ಆಪ್ತರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದಾರೆ. ಉದ್ದೇಶಪೂರ್ವಕವಲ್ಲದ ನರಹತ್ಯೆ ಮತ್ತು ನಿರ್ಲಕ್ಷ್ಯದ ಆರೋಪಗಳನ್ನು ಈ ಮೂವರ ಮೇಲೆ ಹೊರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  

ವಿಜಯ್‌ ಅವರ ಆಪ್ತರಾದ ಮತ್ತು ಟಿವಿಕೆಯ ಹಿರಿಯ ಸದಸ್ಯರಾದ ಬುಸ್ಸಿ ಆನಂದ್‌, ಜಿ.ಆರ್‌.ನಿರ್ಮಲ್‌ ಕುಮಾರ್‌, ಪಿ.ವಿ.ಮಥಿಯಳಗನ್‌ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ತನಿಖೆಯಿಂದ ಎಲ್ಲವೂ ಬಹಿರಂಗವಾಗಲಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.