ADVERTISEMENT

ಕಾಶ್ಮೀರ ರಾಜ್ಯಪಾಲರ ಟ್ವಿಟರ್‌ ಖಾತೆ ಹ್ಯಾಕ್‌: ಇಮ್ರಾನ್‌ ಖಾನ್‌ ಖಾತೆ ಫಾಲೋ

ಏಜೆನ್ಸೀಸ್
Published 1 ಮೇ 2019, 2:39 IST
Last Updated 1 ಮೇ 2019, 2:39 IST
   

ಶ್ರೀನಗರ: ಜಮ್ಮು ಕಾಶ್ಮೀರರಾಜ್ಯಪಾಲ ಸತ್ಯಪಾಲ್‌ ಮಲೀಕ್‌ ಅವರ ಅಧಿಕೃತ ಟ್ವಿಟರ್‌ ಖಾತೆಗೆ ಹ್ಯಾಕರ್‌ಗಳು ಕನ್ನ ಹಾಕಿದ್ದು, ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್‌ ಖಾನ್‌ ಅವರನ್ನು ಫಾಲೋ ಮಾಡಿದ್ದಾರೆ. ಈ ಕುರಿತು ಮಲೀಕ್‌ ಅವರ ಕಚೇರಿ ಮಂಗಳವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.

ರಾಜ್ಯಪಾಲರ ಕಚೇರಿಯ ಅಧಿಕೃತ ಟ್ವಿಟರ್‌ ಖಾತೆಯಿಂದ ಈ ಹಿಂದೆ ಇಮ್ರಾನ್‌ ಖಾನ್‌ ಅವರನ್ನು ಫಾಲೋ ಮಾಡಿರಲಿಲ್ಲ. ಆದರೆ, ಫಾಲೋ ಮಾಡುತ್ತಿರುವುದಾಗಿ ಮಂಗಳವಾರ ಬೆಳಗ್ಗೆ ರಾಜ್ಯಪಾಲರ ಕಚೇರಿಯಟ್ವಿಟರ್‌ ಖಾತೆಯಲ್ಲಿ ಕಾಣುತ್ತಿತ್ತು. ಎಚ್ಚೆತ್ತುಕೊಂಡ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಟ್ವಿಟರ್‌ ಖಾತೆ ಹ್ಯಾಕ್‌ ಆಗಿರುವುದು ಪತ್ತೆಯಾಗಿದೆ. ‌ಕೂಡಲೇ ಇಮ್ರಾನ್‌ ಖಾನ್‌ ಅವರನ್ನು ಅನ್‌ಫಾಲೋ ಮಾಡಲಾಗಿದೆ.

‘ಈ ಕೃತ್ಯ ಯಾರು ಮಾಡಿದ್ದಾರೆಂಬುದು ಸದ್ಯ ಪತ್ತೆಯಾಗಿಲ್ಲ. ಹ್ಯಾಕ್‌ ಆಗಿದೆ ಎಂದು ತಿಳಿಯುತ್ತಲೇ ಅಕೌಂಟ್‌ಗೆ ಸಂಬಂಧಿಸಿದ ಸೂಕ್ತ ಮಾರ್ಪಾಡುಗಳನ್ನು ನಾವು ಮಾಡಿದ್ದೇವೆ. ಪೊಲೀಸರಿಗೆ ದೂರು ನೀಡಿದ್ದೇವೆ,’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಸದ್ಯ ಜಮ್ಮು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಲ್ಲಿದ್ದು, ರಾಜ್ಯಪಾಲ ಸತ್ಯಪಾಲ್‌ ಮಲೀಕ್‌ ಅವರೇ ಆಡಳಿತದ ಉಸ್ತುವಾರಿ ವಹಿಸಿದ್ದಾರೆ. ಸಾರ್ವಜನಿಕ ಬದುಕಿನಲ್ಲಿರುವವರ ಮತ್ತು ಸರ್ಕಾರದ ಇಲಾಖೆಗಳಅಕೌಂಟ್‌ಗಳನ್ನು ಹ್ಯಾಕ್‌ ಮಾಡುವುದು ಬಂಡಾಯ, ಪ್ರತಿಭಟನೆಯ ಒಂದು ಬಗೆ. ಆದರೆ, ಮಲೀಕ್‌ ಅವರ ವಿಚಾರದಲ್ಲಿ ಇದು ಪ್ರತಿಭಟನಾತ್ಮಕವಾಗಿ ನಡೆಯಿತೋ ಅಥವಾ ದುರುದ್ಧೇಶ ಪೂರ್ವಕವಾಗಿ ನಡೆದಿದೆಯೋ ಎಂಬುದು ಈ ವರೆಗೆ ತಿಳಿದು ಬಂದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.