ADVERTISEMENT

ಕಾಂಗ್ರೆಸ್‌ ಟೂಲ್‌ಕಿಟ್‌: ಸಂಬಿತ್‌ ಪಾತ್ರ ಟ್ವೀಟ್‌ ತಿರುಚಿದ್ದು ಎಂದ ಟ್ವಿಟರ್‌

ಕಾಂಗ್ರೆಸ್‌ನ ‘ಟೂಲ್‌ಕಿಟ್‌’ ಹೆಸರಿನಲ್ಲಿ ಟ್ವೀಟ್‌ ಮೂಲಕ ದಾಖಲೆ ಹಂಚಿಕೊಂಡಿದ್ದ ಬಿಜೆಪಿ ವಕ್ತಾರ

ಪಿಟಿಐ
Published 21 ಮೇ 2021, 5:56 IST
Last Updated 21 ಮೇ 2021, 5:56 IST
ಸಂಬಿತ್‌ ಪಾತ್ರ
ಸಂಬಿತ್‌ ಪಾತ್ರ    

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್‌ ‘ಟೂಲ್‌ಕಿಟ್’ ಸಿದ್ಧಪಡಿಸಿದೆ ಎಂದು ಆರೋಪಿಸಿ ಬಿಜೆಪಿ ವಕ್ತಾರ ಸಂಬಿತ್‌ ಪಾತ್ರಾ, ಟ್ವೀಟ್‌ ಮೂಲಕ ಹಂಚಿಕೊಂಡಿರುವ ಮಾಹಿತಿಗೆ ‘ತಿರುಚಿದ ಮಾಧ್ಯಮ’ ಎಂಬುದಾಗಿ ಟ್ವಿಟರ್‌ ಗುರುತು ಹಾಕಿದೆ.

‘ಟ್ವೀಟ್‌ ಮೂಲಕ ಹಂಚಿಕೊಳ್ಳಲಾಗುವ ಇಂಥ ವಿಡಿಯೊ, ಧ್ವನಿಮುದ್ರಿಕೆ ಹಾಗೂ ಚಿತ್ರಗಳನ್ನು ತಪ್ಪುದಾರಿಗೆಳೆಯುವ ಉದ್ದೇಶದಿಂದ ತಿರುಚಿರುವುದು ಅಥವಾ ಕಲ್ಪಿತ ಮಾಹಿತಿ ಎಂಬುದಾಗಿ ಗುರುತು ಮಾಡಲಾಗುವುದು’ ಎಂದು ಟ್ವಿಟರ್‌ ಹೇಳಿದೆ.

‘ಕೇಂದ್ರ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ‘ಟೂಲ್‌ಕಿಟ್‌’ ಮೂಲಕ ಕಾಂಗ್ರೆಸ್‌ ಪಕ್ಷ ವಿವಾದಾತ್ಮಕ ವಿಷಯಗಳನ್ನು ಹರಿಬಿಟ್ಟಿದೆ ಎಂದು ಆರೋಪಿಸಿರುವ ಬಿಜೆ‍ಪಿ ನಾಯಕರು, ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.

ADVERTISEMENT

‘ತಪ್ಪು ಮಾಹಿತಿಯನ್ನು ಹರಡಿ, ಆ ಮೂಲಕ ಬಿಜೆಪಿ ಮುಖಂಡರು ಸಮಾಜದ ಶಾಂತಿಗೆ ಭಂಗ ತರುವ ಕಾರ್ಯದಲ್ಲಿ ತೊಡಗಿದ್ದಾರೆ’ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಅಲ್ಲದೇ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಸೇರಿದಂತೆ ಬಿಜೆಪಿ ಮುಖಂಡರ ಖಾತೆಗಳನ್ನು ಶಾಶ್ವತವಾಗಿ ಸ್ಥಗಿತಗೊಳಿಸುವಂತೆ ಕಾಂಗ್ರೆಸ್‌ ಪಕ್ಷ ಟ್ವಿಟರ್‌ಗೆ ಗುರುವಾರ ಪತ್ರ ಬರೆದಿದೆ.

ಬಿಜೆಪಿ ಹಂಚಿಕೊಂಡಿರುವ ‘ಟೂಲ್‌ಕಿಟ್‌’ ದಾಖಲೆಗಳು ನಕಲಿ ಎಂದು ಹೇಳಿರುವ ಕಾಂಗ್ರೆಸ್‌, ಈ ಸಂಬಂಧ ದೂರು ದಾಖಲಿಸಿದೆ. ಈ ದೂರಿನನ್ವಯ ಛತ್ತೀಸಗಡ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.