ADVERTISEMENT

ಪುರಿ ಜಗನ್ನಾಥ ದೇವಾಲಯ: ಕಾಲ್ತುಳಿತ, ಇಬ್ಬರಿಗೆ ಗಾಯ

ಪಿಟಿಐ
Published 15 ಜನವರಿ 2023, 10:39 IST
Last Updated 15 ಜನವರಿ 2023, 10:39 IST
ಪುರಿಯ ಜಗನ್ನಾಥ ದೇವಾಲಯ –ಪಿಟಿಐ ಸಂಗ್ರಹ ಚಿತ್ರ 
ಪುರಿಯ ಜಗನ್ನಾಥ ದೇವಾಲಯ –ಪಿಟಿಐ ಸಂಗ್ರಹ ಚಿತ್ರ    

ಪುರಿ: ಇಲ್ಲಿನ ಪ್ರಸಿದ್ಧ ಶ್ರೀ ಜಗನ್ನಾಥ ದೇವಾಲಯದಲ್ಲಿ ಭಾನುವಾರ ಕಾಲ್ತುಳಿತದಲ್ಲಿ ಸಿಲುಕಿ ಇಬ್ಬರು ಭಕ್ತರು ಗಾಯಗೊಂಡು ಪ್ರಜ್ಞಾಹೀನರಾಗಿದ್ದು, ಅವರನ್ನು ಇಲ್ಲಿನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪುರಿ ಜಿಲ್ಲೆಯ ಹತಗಡಿಯಾ ಸಾಹಿಯ ಮಹಿಳೆ ಹಾಗೂ ಕಟಕ್ ಜಿಲ್ಲೆಯ ಪಿತಾಪುರ್‌ನ ಬಾಲಕಿ ಗಾಯಗೊಂಡವರು. ಇಬ್ಬರನ್ನೂ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಪುರಿ ಜಿಲ್ಲಾಧಿಕಾರಿ ಸಮರ್ಥ ವರ್ಮಾ ಅವರು ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು, ಜಿಲ್ಲಾಸ್ಪತ್ರೆಗೆ ತೆರಳಿ ಗಾಯಗೊಂಡಿದ್ದ ಭಕ್ತರ ಆರೋಗ್ಯ ವಿಚಾರಿಸಿದರು.

ADVERTISEMENT

ದೇವಾಲಯದ ‘ಸಿಂಹ ದ್ವಾರ’ದ ಬಳಿ ಬಾಗಿಲು ತೆರೆಯುವ ಮುನ್ನವೇ ದೊಡ್ಡ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು. ದ್ವಾರ ತೆರೆಯುತ್ತಿದ್ದಂತೆಯೇ ದೇವರ ಮೊದಲ ಆರತಿ ‘ಮಂಗಲ ಆರತಿ’ಯನ್ನು ವೀಕ್ಷಿಸಲು ಭಕ್ತರು ಮುಗಿಬಿದ್ದ ಕಾರಣ, ಇಬ್ಬರು ಭಕ್ತರು ಗಾಯಗೊಂಡು ಸ್ಥಳದಲ್ಲೇ ಬಿದ್ದರು. ಹಿಂದಿನ ದಿನ ಮಕರ ಸಂಕ್ರಾಂತಿ ಇದ್ದ ಕಾರಣ, ಮರುದಿನ ದೇವಾಲಯದ ಬಾಗಿಲು ತೆರೆಯುವುದು ಕೆಲಕಾಲ ವಿಳಂಬವಾಯಿತು ಎಂದು ದೇವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಕರ ಮೇಳದ ನಿಮಿತ್ತ ಕಟಕ್‌ ಜಿಲ್ಲೆಯ ಬದಂಬಾ-ಗೋಪಿನಾಥಪುರದ ಟಿ- ಸೇತು ಸೇತುವೆಯ ಮೇಲೆ ಹೆಚ್ಚಿನ ಸಂಖ್ಯೆಯ ಜನರು ನೆರೆದಿದ್ದರಿಂದ ಉಂಟಾದ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಸಾವಿಗೀಡಾದ ಮರುದಿನವೇ ಈ ಘಟನೆ ನಡೆದಿದೆ. ಕಾಲ್ತುಳಿತದಲ್ಲಿ ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.