ADVERTISEMENT

ಇಬ್ಬರು ಆರೋಗ್ಯ ಕಾರ್ಯಕರ್ತರಲ್ಲಿ ನಿಫಾ ಸೋಂಕಿನ ಲಕ್ಷಣ: ಕೇರಳ ಆರೋಗ್ಯ ಸಚಿವೆ

ಪಿಟಿಐ
Published 5 ಸೆಪ್ಟೆಂಬರ್ 2021, 15:26 IST
Last Updated 5 ಸೆಪ್ಟೆಂಬರ್ 2021, 15:26 IST
ನಿಫಾ ವೈರಸ್‌ನಿಂದ ಮೃತಪಟ್ಟ ಬಾಲಕನ ಅಂತ್ಯಕ್ರಿಯೆ ನಡೆಸುತ್ತಿರುವ ದೃಶ್ಯ.
ನಿಫಾ ವೈರಸ್‌ನಿಂದ ಮೃತಪಟ್ಟ ಬಾಲಕನ ಅಂತ್ಯಕ್ರಿಯೆ ನಡೆಸುತ್ತಿರುವ ದೃಶ್ಯ.   

ಕೋಯಿಕ್ಕೋಡ್: ಕೇರಳದಲ್ಲಿ ನಿಫಾ ವೈರಸ್‌ನಿಂದ ಮೃತಪಟ್ಟ 12 ವರ್ಷದ ಬಾಲಕನ ಸಂಪರ್ಕಕ್ಕೆ ಒಳಗಾದ ಇಬ್ಬರು ಆರೋಗ್ಯ ಕಾರ್ಯಕರ್ತರಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿವೆ ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಚಾರ್ಜ್ ತಿಳಿಸಿದ್ದಾರೆ.

ನಿಫಾ ವೈರಸ್‌ನಿಂದಾಗಿ ಶನಿವಾರ ರಾತ್ರಿ ಬಾಲಕ ಮೃತಪಟ್ಟಿದ್ದಾನೆ. ಬಾಲಕನ ಮಾದರಿಗಳಲ್ಲಿ ನಿಫಾ ವೈರಸ್ ಇರುವುದನ್ನು ಪುಣೆಯ 'ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ' ದೃಢಪಡಿಸಿದೆ.

ಬಾಲಕನ ಸಂಪರ್ಕಕ್ಕೆ ಒಳಗಾಗಿರುವ 20 ಮಂದಿಯನ್ನು 'ಹೈ-ರಿಸ್ಕ್' ವಿಭಾಗ ಎಂದು ಗುರುತಿಸಲಾಗಿದೆ. ಇವರನ್ನು ಕೋಯಿಕ್ಕೋಡ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ ಎಂದು ವೀಣಾ ಜಾರ್ಜ್ ತಿಳಿಸಿದರು.

ಇದುವರೆಗೆ ಬಾಲಕನ ಸಂಪರ್ಕಕ್ಕೆ ಒಳಗಾದ 188 ಮಂದಿಯನ್ನು ಪತ್ತೆ ಹಚ್ಚಲಾಗಿದೆ. ಈ ಪೈಕಿ 20 ಮಂದಿಯನ್ನು 'ಹೆಚ್ಚಿನ ಅಪಾಯದ ವಿಭಾಗ'ದಲ್ಲಿ ಗುರುತಿಸಲಾಗಿದ್ದು, ಕಣ್ಗಾವಲು ಇರಿಸಲಾಗಿದೆ.

'ಇಬ್ಬರಲ್ಲಿ ರೋಗಲಕ್ಷಣಗಳು ಕಂಡುಬಂದಿವೆ. ಅವರಿಬ್ಬರೂ ಆರೋಗ್ಯ ಕಾರ್ಯಕರ್ತರಾಗಿದ್ದಾರೆ. ಒಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು, ಮತ್ತೊಬ್ಬರು ಕೋಯಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಸಿಬ್ಬಂದಿಯಾಗಿದ್ದಾರೆ' ಎಂದು ಉನ್ನತ ಮಟ್ಟದ ಸಭೆಯ ಬಳಿಕ ತಿಳಿಸಿದ್ದಾರೆ.

'ಬಾಲಕನ ಸಂಪರ್ಕಕ್ಕೆ ಬಂದಿರುವ ಎಲ್ಲರನ್ನು ಪ್ರತ್ಯೇಕಿಸಲು ಕ್ರಮ ಕೈಗೊಳ್ಳಲಾಗಿದೆ. ನಿಫಾ ಚಿಕಿತ್ಸೆಗಾಗಿ ವೈದ್ಯಕೀಯ ಕಾಲೇಜಿನಲ್ಲಿ ಪ್ರತ್ಯೇಕ ವಾರ್ಡ್ ಕೂಡಾ ತೆರೆಯಲಾಗಿದೆ. ಬಾಲಕನ ಮನೆಯ ಮೂರು ಕಿ.ಮೀ. ವ್ಯಾಪ್ತಿಯನ್ನು ಕಂಟೈನ್‌ಮೆಂಟ್ ವಲಯವಾಗಿ ಘೋಷಿಸಲಾಗಿದೆ. ಸಮೀಪದ ಪ್ರದೇಶಗಳಲ್ಲೂ ಕಣ್ಗಾವಲು ಏರ್ಪಡಿಸಲಾಗಿದೆ' ಎಂದು ಹೇಳಿದ್ದಾರೆ.

'ಕೋಯಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಟೆಸ್ಟಿಂಗ್ ಕೇಂದ್ರವನ್ನು ತರೆಯುವಂತೆ ಪುಣೆ ಎನ್‌ಐವಿ ಅಧಿಕಾರಿಗಳಿಗೆ ವಿನಂತಿಸಲಾಗಿದೆ. ಎನ್‌ಐವಿ ತಂಡವು ಇಲ್ಲಿಗೆ ಬಂದು ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ. ಪ್ರಾಥಮಿಕ ವೈದ್ಯಕೀಯ ಪರೀಕ್ಷೆಯಲ್ಲಿ ರೋಗಿಯಲ್ಲಿ ಸೋಂಕು ಲಕ್ಷಣಗಳು ಕಂಡುಬಂದರೆ ಖಚಿತಪಡಿಸಿಕೊಳ್ಳಲು ಮಾದರಿಯನ್ನು ಮಗದೊಮ್ಮೆ ಪುಣೆ ಎನ್‌ಐವಿಗೆ ರವಾನಿಸಲಾಗುವುದು. ಟೆಸ್ಟಿಂಗ್ ಫಲಿತಾಂಶವು 12 ತಾಸಿನೊಳಗೆ ಲಭ್ಯವಾಗಲಿದೆ' ಎಂದು ಹೇಳಿದ್ದಾರೆ.

ಸಭೆಯಲ್ಲಿ ಔಷಧಿಗಳ ಲಭ್ಯತೆಯ ಬಗ್ಗೆ ಪರಿಶೀಲಿಸಲಾಯಿತು. ಬಾಲಕ ಸಂಚರಿಸಿದ ಆಧಾರದಲ್ಲಿ ಕಳೆದ ಎರಡು ವಾರಗಳ 'ರೂಟ್ ಮ್ಯಾಪ್' ಕೂಡಾ ಬಿಡುಗಡೆ ಮಾಡಲಾಗುವುದು. ಸಂಪರ್ಕ ಪತ್ತೆಹಚ್ಚುವಿಕೆ, ಕಣ್ಗಾವಲು ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ 16 ತಂಡಗಳನ್ನು ರಚಿಸಲಾಗಿದೆ.

ನಿಫಾ ಸಹಾಯವಾಣಿ ಸಂಖ್ಯೆ(ಕೇರಳ):
0495-2382500,
0495-2382800

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.