ADVERTISEMENT

ಕುಡಿದ ಮತ್ತಿನಲ್ಲಿ ವಿಮಾನ ಸಿಬ್ಬಂದಿಯೊಂದಿಗೆ ಅಸಭ್ಯ ವರ್ತನೆ: ಇಬ್ಬರು ಬಂಧನ

ಪಿಟಿಐ
Published 23 ಮಾರ್ಚ್ 2023, 5:47 IST
Last Updated 23 ಮಾರ್ಚ್ 2023, 5:47 IST
ಇಂಡಿಗೋ ಏರ್‌ಲೈನ್ಸ್‌
ಇಂಡಿಗೋ ಏರ್‌ಲೈನ್ಸ್‌   

ಮುಂಬೈ: ಕುಡಿದ ಮತ್ತಿನಲ್ಲಿ ವಿಮಾನದ ಸಿಬ್ಬಂದಿ ಮತ್ತು ಸಹ ಪ್ರಯಾಣಿಕರನ್ನು ನಿಂದಿಸಿ ಅಶಿಸ್ತಿನಿಂದ ವರ್ತಿಸಿದ ಆರೋಪದ ಮೇಲೆ ದುಬೈ–ಮುಂಬೈ ಇಂಡಿಗೋ ಏರ್‌ಲೈನ್ಸ್‌ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಪ್ರಯಾಣಿಕರನ್ನು ಬಂಧಿಸಲಾಗಿದೆ.

ಬುಧವಾರ ವಿಮಾನವು ಮುಂಬೈಗೆ ಬಂದಿಳಿದ ನಂತರ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಗುರುವಾರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಇಬ್ಬರು ಆರೋಪಿಗಳು ಪಾಲ್ಘರ್ ಮತ್ತು ಕೊಲ್ಹಾಪುರದ ನಲಸೋಪಾರದವರಾಗಿದ್ದು, ಗಲ್ಫ್‌ನಲ್ಲಿ ಒಂದು ವರ್ಷ ಕೆಲಸ ಮಾಡಿ ಹಿಂತಿರುಗುತ್ತಿದ್ದರು. ಪ್ರಯಾಣದ ವೇಳೆ ತಂದಿದ್ದ ಮದ್ಯವನ್ನು ಸೇವಿಸಿ ಸಂಭ್ರಮಿಸಲು ಪ್ರಾರಂಭಿಸಿದ್ದರು.’

ADVERTISEMENT

ಸಹ ಪ್ರಯಾಣಿಕರು ಗದ್ದಲಕ್ಕೆ ಆಕ್ಷೇಪ ವ್ಯಕ್ತಪಡಿಸಿದಾಗ ವಿಮಾನದ ಸಿಬ್ಬಂದಿ ಮಧ್ಯಪ್ರವೇಶಿಸಿ ಅವರಿಂದ ಬಾಟಲಿಗಳನ್ನು ತೆಗೆದುಕೊಂಡರು. ನಂತರ ಆರೋಪಿಗಳು ಸಹ ಪ್ರಯಾಣಿಕರು ಮತ್ತು ವಿಮಾನದ ಸಿಬ್ಬಂದಿಯನ್ನು ನಿಂದಿಸಿ ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 336 (ಇತರರ ಜೀವ ಮತ್ತು ಸುರಕ್ಷತೆಗೆ ಅಪಾಯವನ್ನು ಉಂಟುಮಾಡುವುದಕ್ಕಾಗಿ) ಮತ್ತು ವಿಮಾನ ನಿಯಮಗಳು 21, 22 ಮತ್ತು 25 ರ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಸಹರ್ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

ಪ್ರಯಾಣಿಕರ ಅಶಿಸ್ತಿನ ವರ್ತನೆಗೆ ಸಂಬಂಧಿಸಿದಂತೆ ಈ ವರ್ಷದಲ್ಲಿ ದಾಖಲಾದ ಏಳನೇ ಪ್ರಕರಣ ಇದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.