ADVERTISEMENT

ಪ್ರತಿ ಐದರಲ್ಲಿ ಒಂದು ಹೆಣ್ಣು ಮಗುವಿಗೆ ಬಾಲ್ಯ ವಿವಾಹ: ಕೇಂದ್ರ ಸಚಿವೆ

ಪಿಟಿಐ
Published 27 ನವೆಂಬರ್ 2024, 10:49 IST
Last Updated 27 ನವೆಂಬರ್ 2024, 10:49 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನವದೆಹಲಿ: ಕಳೆದ ಒಂದು ವರ್ಷದಲ್ಲಿ ಎರಡು ಲಕ್ಷ ಬಾಲ್ಯ ವಿವಾಹಗಳನ್ನು ತಡೆದಿದ್ದೇವೆ. ಆದರೂ, ದೇಶದಲ್ಲಿರುವ ಪ್ರತಿ ಐದು ಹೆಣ್ಣು ಮಕ್ಕಳಲ್ಲಿ ಒಬ್ಬರಿಗೆ 18 ವರ್ಷ ತುಂಬುವ ಮೊದಲೇ ಕಾನೂನುಬಾಹಿರವಾಗಿ ಮದುವೆ ಮಾಡಿಸಲಾಗುತ್ತಿದೆ ಎಂದು ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅನ್ನಪೂರ್ಣ ದೇವಿ ಬುಧವಾರ ಹೇಳಿದ್ದಾರೆ. ಇಂತಹ ಪಾಪ ಕೃತ್ಯವನ್ನು ಸಂಪೂರ್ಣವಾಗಿ ನಿಲ್ಲಿಸಬೇಕಿದೆ ಎಂದು ಒತ್ತಿ ಹೇಳಿದ್ದಾರೆ.

'ಬಾಲ ವಿವಾಹ ಮುಕ್ತ ಭಾರತ ಅಭಿಯಾನ'ಕ್ಕೆ ಚಾಲನೆ ನೀಡಿ ಮಾತನಾಡಿರುವ ಅವರು, ಬಾಲ್ಯ ವಿವಾಹ ಪ್ರಕರಣಗಳನ್ನು 2029ರ ಒಳಗಾಗಿ ಶೇ 5ಕ್ಕಿಂತ ಕೆಳಗಿಳಿಸುವ ನಿಟ್ಟಿನಲ್ಲಿ ಆದ್ಯತೆಯ ಮೇರೆಗೆ ಕ್ರಿಯಾಯೋಜನೆ ರೂಪಿಸುವಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕರೆ ನೀಡಿದ್ದಾರೆ.

ADVERTISEMENT

ರಾಷ್ಟ್ರೀಯ ಸರಾಸರಿಗಿಂತಲೂ ಅತ್ಯಧಿಕ ಪ್ರಕರಣಗಳು ವರದಿಯಾಗುತ್ತಿರುವ ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್‌, ರಾಜಸ್ಥಾನ, ತ್ರಿಪುರಾ, ಅಸ್ಸಾಂ ಮತ್ತು ಆಂಧ್ರ ಪ್ರದೇಶದ ಸುಮಾರು 300 ಜಿಲ್ಲೆಗಳ ಮೇಲೆ ಈ ಅಭಿಯಾನವು ಗಮನ ಹರಿಸಲಿದೆ.

'ಬಾಲ್ಯ ವಿವಾಹವು ನಮ್ಮ ಮುಂದಿರುವ ಪ್ರಮುಖ ಸವಾಲಾಗಿದೆ. ಇದು ಲಕ್ಷಾಂತರ ಹೆಣ್ಣು ಮಕ್ಕಳ ಸಾಮರ್ಥ್ಯವನ್ನು ಅಡಗಿಸುತ್ತಿದೆ. ನಮ್ಮ ದೇಶದಲ್ಲಿ ಇಂದು ಪ್ರತಿ ಐದರಲ್ಲಿ ಒಂದು ಹೆಣ್ಣು ಮಗುವಿಗೆ 18 ವರ್ಷಕ್ಕೂ ಮೊದಲೇ ಮದುವೆ ಮಾಡಲಾಗುತ್ತಿದೆ. ಬಾಲ್ಯ ವಿವಾಹದ ರೀತಿಯಲ್ಲಿಯೂ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿರುವುದು ಅತ್ಯಂತ ಗಂಭೀರ ವಿಚಾರವಾಗಿದೆ. ಕಾನಾನೂತ್ಮಕವಾಗಿ ಇದು ಅಪರಾಧ ಕೃತ್ಯ' ಎಂದು ದೇವಿ ವಿವರಿಸಿದ್ದಾರೆ.

'ಬಾಲ್ಯ ವಿವಾಹ ತಡೆ ಕಾಯ್ದೆಯಂತೆಯೇ, ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಶಾಸನಗಳಿಂದಲೇ ಎಲ್ಲ ಸಮಸ್ಯೆ ಬಗೆಹರಿಸಲಾಗದು' ಎಂದು ಪ್ರತಿಪಾದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.