ADVERTISEMENT

ಮಹಾ ಬಂಡಾಯ| ‘ನಾಪತ್ತೆ’ಯಾಗಿದ್ದ ಇಬ್ಬರು ಶಾಸಕರು ವಾಪಸ್

ಒತ್ತಾಯದಿಂದ ಆಸ್ಪತ್ರೆಗೆ ದಾಖಲಿಸಿ ಇಂಜೆಕ್ಷನ್ ನೀಡಲಾಗಿದೆ: ನಿತಿನ್ ದೇಶಮುಖ್ ಆರೋಪ

ಪಿಟಿಐ
Published 22 ಜೂನ್ 2022, 17:21 IST
Last Updated 22 ಜೂನ್ 2022, 17:21 IST
ಬಂಡಾಯ ಶಾಸಕರ ತಂಡ
ಬಂಡಾಯ ಶಾಸಕರ ತಂಡ   

ನಾಗಪುರ/ಮುಂಬೈ: ಮಹಾರಾಷ್ಟ್ರ ಸರ್ಕಾರದ ವಿರುದ್ಧ ಬಂಡಾಯ ಸಾರಿರುವ ಶಿವಸೇನಾ ಮುಖಂಡ ಏಕನಾಥ ಶಿಂಧೆ ಅವರ ಬಣದಿಂದ ಮತ್ತೊಬ್ಬ ಶಾಸಕ ತಪ್ಪಿಸಿಕೊಂಡು ಬಂದಿದ್ದಾರೆ. ಕೈಲಾಶ್ ಪಾಟೀಲ್ ಅವರ ಬಳಿಕ, ನಿತಿನ್ ದೇಶಮುಖ್ ಅವರು ಮಹಾರಾಷ್ಟ್ರಕ್ಕೆ ವಾಪಸಾಗಿದ್ದಾರೆ.

ಶಿಂಧೆ ಜೊತೆ ಸೂರತ್‌ಗೆ ತೆರಳಿದ್ದ ನಿತಿನ್ ದೇಶಮುಖ್ ಅವರು ಬುಧವಾರ ನಾಗಪುರ ತಲುಪಿದ್ದಾರೆ. ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೊನೆಗೂ ಸುರಕ್ಷಿತವಾಗಿ ಬಂದಿದ್ದೇನೆ ಎಂದರು. ಉದ್ಧವ್ ಠಾಕ್ರೆ ಅವರಿಗೆ ದೇಶಮುಖ್ ನಿಷ್ಠೆ ವ್ಯಕ್ತಪಡಿಸಿದರು.ತಮ್ಮ ಪತಿ ನಾಪತ್ತೆಯಾಗಿದ್ದಾರೆ ಎಂಬುದಾಗಿ ನಿತಿನ್ ಅವರ ಪತ್ನಿ ಪೊಲೀಸರಿಗೆ ದೂರು ನೀಡಿದ ಮರುದಿನ ಅವರು ಕಾಣಿಸಿಕೊಂಡಿದ್ದಾರೆ.

ಸೂರತ್‌ನಲ್ಲಿ ತಮ್ಮನ್ನು ಒತ್ತಾಯಪೂರ್ವಕವಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಆರೋಪಿಸಿರುವ ನಿತಿನ್, ಹೃದಯಾಘಾತವಾಗದಿದ್ದರೂ, ತಮಗೆ ಇಂಜೆಕ್ಷನ್ ನೀಡಲಾಗಿತ್ತು ಎಂದು ಹೇಳಿದ್ದಾರೆ.‘ನಾನೊಬ್ಬ ಶಿವಸೈನಿಕ. ನಾನು ಆರೋಗ್ಯವಾಗಿದ್ದೇನೆ. ಆದರೆ ಸೂರತ್‌ನಲ್ಲಿ 20–25 ಜನರು ಹಾಗೂ ಪೊಲೀಸರು ಸೇರಿಕೊಂಡು ನನ್ನನ್ನು ಆಸ್ಪತ್ರೆಗೆ ದಾಖಲಿಸಿದ್ದರು’ ಎಂದು ದೇಶಮುಖ್ ಆರೋಪಿಸಿದ್ದಾರೆ.

ADVERTISEMENT

ಶಿಂಧೆ ಅವರ ಬಣವು ಕೆಲವು ಶಾಸಕರನ್ನು ದಾರಿತಪ್ಪಿಸಿ ಗುಜರಾತ್‌ಗೆ ಅಪಹರಿಸಿ ಕರೆದೊಯ್ಯಲಾಗುತ್ತಿದೆ ಎಂದು ಶಿವಸೇನಾ ವಕ್ತಾರ ಸಂಜಯ್ ರಾವುತ್ ಅವರು ಮಂಗಳವಾರ ಆರೋಪಿಸಿದ್ದರು. ಆಪರೇಷನ್ ಕಮಲದ ಭಾಗವಾಗಿ ದೇಶ್‌ಮುಖ್ ಅವರನ್ನು ಪೊಲೀಸರು ಹಾಗೂ ಗೂಂಡಾ ಗಳು ಥಳಿಸಿದ್ದಾರೆ ಎಂದು ಹೇಳಿದ್ದರು.

ತಮ್ಮ ಪತಿ ಸೋಮವಾರ ರಾತ್ರಿಯಿಂದ ಕಾಣೆಯಾಗಿದ್ದಾರೆ ಎಂದು ದೇಶಮುಖ್ ಅವರ ಪತ್ನಿ ಪೊಲೀಸರಿಗೆ ದೂರು ನೀಡಿದ್ದರು.

ಇದಕ್ಕೂ ಮುನ್ನ, ಶಿವಸೇನಾದ ಮತ್ತೊಬ್ಬ ಶಾಸಕ ಕೈಲಾಶ್ ಪಾಟೀಲ್ ಅವರುಮಂಗಳವಾರ ನಸುಕಿನಲ್ಲಿ ಶಿಂಧೆ ಬಣದಿಂದ ತಪ್ಪಿಸಿಕೊಂಡು ಬಂದಿದ್ದರು. ತಾವು ತಪ್ಪಿಸಿಕೊಂಡು ಬಂದ ಘಟನೆಯನ್ನು ಕೈಲಾಶ್ ವಿವರಿಸಿದ್ದಾರೆ.‘ಜೂನ್ 20ರಂದು ಠಾಣೆಯಲ್ಲಿ ಶಿಂಧೆ ಅವರು ಕರೆದಿದ್ದ ಔತಣಕೂಟದಲ್ಲಿ ನಾನು ಭಾಗಿಯಾಗಿದ್ದೆ. ನನ್ನ ಜತೆಗೆ ಆರು ಶಾಸಕರು ಇದ್ದರು. ರಾತ್ರಿ 9 ಗಂಟೆಯ ಹೊತ್ತಿಗೆ ಶಾಸಕರನ್ನು ಕರೆದುಕೊಂಡು ಮುಂಬೈನಿಂದ ಹೊರಡುವ ಸುಳಿವು ಸಿಕ್ಕಿತು. ಗುಜರಾತಿನ ಸೂರತ್‌ನತ್ತ ಶಾಸಕರನ್ನು ಕರೆದೊಯ್ಯಲಾಯಿತು. ಮಾರ್ಗಮಧ್ಯೆ ನಾನು ಕಾರಿನಿಂದ ಇಳಿದು ತಪ್ಪಿಸಿಕೊಂಡೆ. ಕಿಲೋಮೀಟರ್‌ಗಟ್ಟಲೆ ನಡೆದು, ದಾರಿಯಲ್ಲಿ ಸಿಕ್ಕ ಬೈಕ್ ಹಾಗೂ ಟ್ರಕ್‌ನಲ್ಲಿ ಪ್ರಯಾಣಿಸಿ ಮಹಾರಾಷ್ಟ್ರ ಗಡಿಗೆ ತಲುಪಿದೆ. ಮುಖ್ಯಮಂತ್ರಿ ಕಚೇರಿಗೆ ಕರೆ ಮಾಡಿದ ಬಳಿಕ ನನಗೆ ಕಾರಿನ ವ್ಯವಸ್ಥೆ ಮಾಡಲಾಯಿತು’ ಎಂದು ಪಾಟೀಲ್ ವಿವರಿಸಿದ್ದಾರೆ.

ಗುವಾಹಟಿಗೆ ಭಿನ್ನಮತೀಯರು

ಗುಜರಾತ್‌ನ ಸೂರತ್‌ನ ಹೋಟೆಲ್‌ನಲ್ಲಿ ಶಿಂಧೆ ನೇತೃತ್ವದಲ್ಲಿ ತಂಗಿದ್ದ ಶಿವಸೇನಾ ಮತ್ತು ಪಕ್ಷೇತರ ಶಾಸಕರು ಮಂಗಳವಾರ ತಡರಾತ್ರಿ ಅಸ್ಸಾಂನ ಗುವಾಹಟಿಗೆ ವಿಶೇಷ ವಿಮಾನದಲ್ಲಿ ಹೋಗಿದ್ದಾರೆ. ಅಲ್ಲಿನ ಪಂಚತಾರಾ
ಹೋಟೆಲ್‌ ಒಂದರಲ್ಲಿ ಅವರಿಗೆ ವಾಸ್ತವ್ಯ ಕಲ್ಪಿಸಲಾಗಿದೆ.

ಮಂಗಳವಾರ ತಡರಾತ್ರಿ ಮತ್ತು ಬುಧವಾರ ಸಂಜೆ ಎರಡು ವಿಶೇಷ ವಿಮಾನಗಳಲ್ಲಿ ಶಿವಸೇನಾ ಮತ್ತು ಪಕ್ಷೇತರ ಶಾಸಕರನ್ನು ಗುವಾಹಟಿಗೆ ಕರೆದೊಯ್ಯಲಾಗಿದೆ. ಅಲ್ಲಿನ ಹೋಟೆಲ್‌ನಲ್ಲಿ ತಂಗಿರುವ ಶಾಸಕರಿಗೆ ಅಸ್ಸಾಂ ಬಿಜೆಪಿ ಶಾಸಕರು ಮತ್ತು ಕಾರ್ಯಕರ್ತರು ಕಾವಲಿಗೆ ಇದ್ದಾರೆ ಎಂದು ಮೂಲಗಳು ಹೇಳಿವೆ.

ಶಿಂಧೆ ಜತೆ ಸೂರತ್‌ನ ಹೋಟೆಲ್‌ನಲ್ಲಿ ಇದ್ದ ಶಿವಸೇನಾ ಶಾಸಕರಾದ ಕೈಲಾಶ್ ಪಾಟೀಲ ಮತ್ತು ನಿತಿನ್ ದೇಶಮುಖ್‌, ಅಲ್ಲಿಂದ ತಪ್ಪಿಸಿಕೊಂಡು ಮುಂಬೈಗೆ ವಾಪಸ್ಸಾಗಿದ್ದಾರೆ. ತಮ್ಮನ್ನು ಅಪಹರಿಸಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ.


ಅಪಸ್ವರವಿದ್ದರೂ ಮೈತ್ರಿ: ಬಂಡಾಯ ಶಾಸಕರ ಆರೋಪ

ಪಕ್ಷದ ನಾಯಕರು ಅಧಿಕಾರಕ್ಕಾಗಿ ಸೈದ್ಧಾಂತಿಕ ವಿರೋಧಿಗಳ ಜತೆಗೆ ಕೈಜೋಡಿಸಿದ್ದಾರೆ. ಆದರೆ, ಪಕ್ಷದ ಕಾರ್ಯಕರ್ತರು ಮತ್ತು ನಾವು ಈ ಬಗ್ಗೆ ಮತದಾರರಿಂದ ಪ್ರಶ್ನೆಗಳನ್ನು ಎದುರಿಸುತ್ತಿದ್ದೇವೆ ಎಂದು ಬಂಡಾಯ ನಾಯಕ ಏಕನಾಥ್ ಶಿಂಧೆ ಪತ್ರದಲ್ಲಿ ವಿವರಿಸಿದ್ದಾರೆ. ಪತ್ರಕ್ಕೆ ಸಹಿ ಮಾಡಿರುವ 34 ಶಾಸಕರು ಏಕನಾಥ ಶಿಂಧೆ ಅವರು ತಮ್ಮ ನಾಯಕ ಮತ್ತು ಭರತ್ ಗೋಗಾವಲೆ ಅವರು ಶಿವಸೇನಾ ಶಾಸಕಾಂಗ ಪಕ್ಷದ ಮುಖ್ಯ ಸಚೇತಕ ಎಂದು ಘೋಷಿಸಿಕೊಂಡಿದ್ದಾರೆ.

‘ಸೈದ್ಧಾಂತಿಕ ವಿರೋಧಿಗಳಾದ ವಿರೋಧ ಪಕ್ಷಗಳ ಜತೆಗೆ ಕೈಜೋಡಿಸಬಾರದು ಎಂದು ಪಕ್ಷದ ಶಾಸಕರು ಮತ್ತು ಕಾರ್ಯಕರ್ತರು ಕೇಳಿಕೊಂಡಿದ್ದರು. ಆದರೆ ಪಕ್ಷದ ನಾಯಕತ್ವವು ಇದನ್ನು ಒಪ್ಪಲಿಲ್ಲ. ಆ ಮನವಿಯನ್ನು ಕಡೆಗಣಿಸಿ, ಮಹಾವಿಕಾಸ ಅಘಾಡಿ (ಎಂವಿಎ) ಸರ್ಕಾರವನ್ನು ರಚಿಸಲಾಯಿತು’ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.

‘ಪಕ್ಷದ ನಾಯಕರ ಈ ನಡೆಯ ವಿರುದ್ಧದ ಮತದಾರರ ಸಿಟ್ಟನ್ನು ಶಾಸಕರು ಮತ್ತು ಕಾರ್ಯಕರ್ತರು ಎರಡೂವರೆ ವರ್ಷದಿಂದ ಎದುರಿಸುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಅಧಿಕಾರ ಹಿಡಿಯುವ ಉದ್ದೇಶದಿಂದ ಪಕ್ಷದ ತತ್ವ, ಸಿದ್ಧಾಂತಗಳಲ್ಲಿ ರಾಜಿ ಮಾಡಿಕೊಳ್ಳಲಾಗಿದೆ’ ಎಂದು ಪತ್ರದಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.