ADVERTISEMENT

ಮೂಸೆವಾಲಾ ಹತ್ಯೆ ಪ್ರಕರಣ: ಇಬ್ಬರು ಶೂಟರ್‌ ಸೇರಿ ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 20 ಜೂನ್ 2022, 14:12 IST
Last Updated 20 ಜೂನ್ 2022, 14:12 IST
ಸಿಧು ಮೂಸೆವಾಲಾ
ಸಿಧು ಮೂಸೆವಾಲಾ   

ನವದೆಹಲಿ: ಜನಪ್ರಿಯ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣ ಸಂಬಂಧ ಇಬ್ಬರು ಶೂಟರ್‌ಗಳು ಸೇರಿ ಮೂವರು ಆರೋಪಿಗಳನ್ನು ದೆಹಲಿ ಪೊಲೀಸ್‌ ವಿಶೇಷ ಘಟಕ ಬಂಧಿಸಿದೆ ಎಂದು ಸೋಮವಾರ ಅಧಿಕಾರಿಗಳು ತಿಳಿಸಿದ್ದಾರೆ.

ಹರ್ಯಾಣದ ಸೋನಿಪತ್‌ನ ಪ್ರಿಯವ್ರತ್ ಅಲಿಯಾಸ್‌ ಫೌಜಿ (26), ಝೆಜ್ಜರ್‌ ಜಿಲ್ಲೆಯ ಕಾಶಿಶ್‌ (24) ಮತ್ತು ಪಂಜಾಬ್‌ನ ಬಟಿಂಡಾದ ನಿವಾಸಿ ಕೇಶವ್‌ ಕುಮಾರ್‌ (29) ಬಂಧಿತ ಆರೋಪಿಗಳು. ಇವರನ್ನು ಗುಜರಾತ್‌ನ ಕಚ್‌ನಲ್ಲಿ ಜೂನ್‌ 19ರಂದು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಹತ್ಯೆ ನಡೆಸುವುದಕ್ಕೂ ಮೊದಲು ಆರೋಪಿಗಳು ಹಲವು ಬಾರಿ ತಾಲೀಮು ನಡೆಸಿರುವುದು ವಿಚಾರಣೆಯಲ್ಲಿ ತಿಳಿದುಬಂದಿದೆ. ಆರೋಪಿಗಳ ಬಂಧನಕ್ಕೆ ಹಲವು ಸ್ಥಳಗಳಲ್ಲಿ ದಾಳಿ ನಡೆಸಲಾಯಿತು ಎಂದುವಿಶೇಷ ಘಟಕದ ವಿಶೇಷ ಪೊಲೀಸ್ ಆಯುಕ್ತ ಎಚ್‌ಜಿಎಸ್ ಧಲಿವಾಲ್ ಹೇಳಿದ್ದಾರೆ.

ADVERTISEMENT

‘ಬಂಧಿತರಿಂದ 8 ಗ್ರೆನೇಡ್‌ಗಳು, 9 ಎಲೆಕ್ಟ್ರಿಕ್ ಡಿಟೋನೇಟರ್‌ಗಳು, ಮೂರು ಪಿಸ್ತೂಲ್‌ಗಳು ಮತ್ತು ಒಂದು ಅಸಾಲ್ಟ್ ರೈಫಲ್ ವಶಪಡಿಸಿಕೊಳ್ಳಲಾಗಿದೆ. ಪಿಸ್ತೂಲ್‌ ಮತ್ತು ರೈಫಲ್‌ಗಳು ಕೈಕೊಟ್ಟರೆ,ಗ್ರೆನೇಡ್‌ಗಳನ್ನು ಪರ್ಯಾಯವಾಗಿ ಬಳಸುವ ಯೋಜನೆ ಹೊಂದಿದ್ದರು. ಆದರೆ, ಅವುಗಳನ್ನು ಆರೋಪಿಗಳು ಬಳಸಿಲ್ಲ. ಸಿಧು ಹತ್ಯೆಗೆ ಹಂತಕರ ಎರಡು ತಂಡಗಳು ಸಕ್ರಿಯವಾಗಿದ್ದವು’ ಎಂದು ಧಲಿವಾಲ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಿಯವ್ರತ್ ಶೂಟರ್‌ಗಳ ತಂಡದ ನೇತೃತ್ವ ವಹಿಸಿದ್ದು, ಹತ್ಯೆ ವೇಳೆ ಕೆನಡಾದ ಪಾತಕಿ ಗೋಲ್ಡಿ ಬ್ರಾರ್ ಜತೆಗೆ ನೇರ ಸಂಪರ್ಕದಲ್ಲಿದ್ದ. ಈತ ಸಿಧು ಹತ್ಯೆಯಲ್ಲಿ ಪ್ರಮುಖ ಶೂಟರ್‌ ಆಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿ ಮೇ 29ರಂದು ಸಿಧು ಮೂಸೆವಾಲಾ (ಶುಭದೀಪ್ ಸಿಂಗ್ ಸಿಧು) ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು. ಈ ಹತ್ಯೆಯ ಹೊಣೆಯನ್ನು ಬ್ರಾರ್ ಹೊತ್ತಿದ್ದ.

ಸಿಧು ಉಸಿರು ನಿಂತ ಮೇಲೆ ದುಷ್ಕರ್ಮಿಗಳು ಪರಾರಿ:

‘ಹತ್ಯೆಯಲ್ಲಿ ಬಳಸಿರುವ ವಾಹನಗಳಲ್ಲಿ ಒಂದು ಬೊಲೆರೊವನ್ನು ಪ್ರಿಯವ್ರತ್ ಚಲಾಯಿಸುತ್ತಿದ್ದರೆ, ಇನ್ನೊಂದು ಕೊರೋಲಾ ಕಾರನ್ನು ಶೂಟರ್‌ಗಳು ಚಾಲನೆ ಮಾಡಿದ್ದಾರೆ. ಕೊರೊಲಾ ಕಾರಿನಲ್ಲಿದ್ದವರುಮೂಸೆವಾಲಾ ಅವರ ಕಾರನ್ನು ಹಿಂದಿಕ್ಕಿ ಅಡ್ಡಗಟ್ಟಿದ್ದಾರೆ. ಆರು ಮಂದಿ ಶೂಟರ್‌ಗಳು ಎರಡೂ ವಾಹನಗಳಿಂದ ಇಳಿದು, ಗಾಯಕನ ಮೇಲೆ ಗುಂಡಿನ ಮಳೆಗರೆದಿದ್ದಾರೆ. ಮೂಸೆವಾಲಾ ಉಸಿರು ನಿಂತಿರುವುದನ್ನು ಖಚಿತಪಡಿಸಿಕೊಂಡ ನಂತರ ಹಂತಕರು ಸ್ಥಳದಿಂದ ಪರಾರಿಯಾಗಿದ್ದರು’ ಎಂದು ಅವರು ತಿಳಿಸಿದರು.

ಸಿ.ಸಿ ಟಿವಿ ಕ್ಯಾಮೆರಾದಲ್ಲಿ ಸಿಕ್ಕ ಸುಳಿವು:

ಘಟನೆಗೂ ಮುನ್ನ ಪೆಟ್ರೋಲ್ ಪಂಪ್‌ವೊಂದರ ಸಿ.ಸಿ ಟಿ.ವಿಯಲ್ಲಿ ಪ್ರಿಯವ್ರತ್ ಮತ್ತುಕಾಶಿಶ್ ಚಲನವಲನ ಸೆರೆಯಾಗಿದೆ. ಪ್ರಿಯವ್ರತ್ ಈ ಹಿಂದೆ ಎರಡು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದು, 2015ರಲ್ಲಿ ಸೋನಿಪತ್‌ನಲ್ಲಿ ಒಮ್ಮೆ ಪೊಲೀಸರು ಬಂಧಿಸಿದ್ದರು. 2021ರಲ್ಲಿ ಸೋನಿಪತ್‌ನಲ್ಲಿ ನಡೆದ ಮತ್ತೊಂದು ಕೊಲೆ ಪ್ರಕರಣದಲ್ಲಿ ಈತ ಬೇಕಾಗಿದ್ದ.ಶೂಟರ್‌ ಕಾಶಿಶ್ 2021ರಲ್ಲಿ ಹರ್ಯಾಣದ ಝೆಜ್ಜರ್‌ನಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಮತ್ತೊಬ್ಬ ಆರೋಪಿ ಕೇಶವ್‌ ಕುಮಾರ್‌, ಶೂಟರ್‌ಗಳನ್ನುಹತ್ಯೆಯ ನಂತರ ಆಲ್ಟೊ ಕಾರಿನಲ್ಲಿ ಕರೆದೊಯ್ದಿದ್ದ. ಈತ ಘಟನೆಯ ದಿನ ಮಾನ್ಸಾ ತನಕ ಶೂಟರ್‌ಗಳ ಜತೆಗಿದ್ದ. 2020ರಲ್ಲಿ ಬಟಿಂಡಾದಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಕುಮಾರ್‌ ಬಂಧಿತನಾಗಿದ್ದ. ಪಂಜಾಬ್‌ನಲ್ಲಿ ಈತ ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.