ADVERTISEMENT

ಸಮೀಕ್ಷೆ | ‘ವಾರಾಂತ್ಯದ ಲಾಕ್‌ಡೌನ್ ಅರ್ಥಹೀನ’: ಶೇ 68ರಷ್ಟು ಜನರ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 12 ಜುಲೈ 2020, 20:59 IST
Last Updated 12 ಜುಲೈ 2020, 20:59 IST
   
""

ನವದೆಹಲಿ: ‘ಕೆಲವು ರಾಜ್ಯಗಳಲ್ಲಿ ಮತ್ತು ನಗರಗಳಲ್ಲಿ ಹೇರಲಾಗುತ್ತಿರುವ ವಾರಾಂತ್ಯದ ಲಾಕ್‌ಡೌನ್‌ ಅರ್ಥಹೀನ ಮತ್ತು ಅದರಿಂದ ಆಗುವ ಪರಿಣಾಮ ಅತ್ಯಲ್ಪ’ ಎಂದು ಶೇ 68ರಷ್ಟು ಜನರು ಹೇಳಿದ್ದಾರೆ ಎಂದು ಸಮೀಕ್ಷಾ ವರದಿಯೊಂದು ತಿಳಿಸಿದೆ.

ಲೋಕಲ್‌ಸರ್ಕಲ್ಸ್‌ ನಡೆಸಿದ ಸಮೀಕ್ಷೆಯಲ್ಲಿ ಭಾಗವಹಿಸಿದ್ದವರಲ್ಲಿ ಪ್ರತಿ ಮೂವರಲ್ಲಿ ಇಬ್ಬರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ ಪತ್ತೆಯಾಗಿರುವ ಕೋವಿಡ್‌ ಪ್ರಕರಣಗಳಲ್ಲಿ ಶೇ 80ರಷ್ಟು ಪ್ರಕರಣಗಳನ್ನು ಹೊಂದಿರುವ 49 ಜಿಲ್ಲೆಗಳಲ್ಲಿ ಈ ಸಮೀಕ್ಷೆ ನಡೆಸಲಾಗಿತ್ತು. ಇದರಲ್ಲಿ 16,000 ಜನರು ಭಾಗವಹಿಸಿದ್ದರು.

ADVERTISEMENT

‘ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಮೂರನೇ ಎರಡರಷ್ಟು ಮಂದಿ, ವಾರಂತ್ಯದ ಲಾಕ್‌ಡೌನ್‌ನಿಂದ ಉಪಯೋಗವಿಲ್ಲ ಎಂದು ಹೇಳಿದ್ದಾರೆ. ಬದಲಿಗೆ 3–4 ವಾರಗಳ ಕಾಲ ಕಠಿಣ ಲಾಕ್‌ಡೌನ್ ಜಾರಿಗೆ ತಂದರೆ, ಸೋಂಕು ಹರಡುವುದನ್ನು ನಿಯಂತ್ರಿಸಬಹುದು ಎಂದು ಅರ್ಧದಷ್ಟು ಜನರು ಹೇಳಿದ್ದಾರೆ’ ಎಂದು ಸಮೀಕ್ಷಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಉತ್ತರ ಪ್ರದೇಶ ಸರ್ಕಾರವು ಭಾನುವಾರ ಮಧ್ಯಾಹ್ನವಷ್ಟೇ ವಾರಾಂತ್ಯದ ಲಾಕ್‌ಡೌನ್ ಘೋಷಿಸಿದೆ. ಒಡಿಶಾ, ಪಂಜಾಬ್, ಮಧ್ಯಪ್ರದೇಶದಲ್ಲೂ ವಾರಾಂತ್ಯ ಲಾಕ್‌ಡೌನ್ ಜಾರಿಯಲ್ಲಿದೆ. ಇದೇ ಸಂದರ್ಭದಲ್ಲಿ ಈ ಸಮೀಕ್ಷೆಯ ವರದಿ ಬಿಡುಗಡೆಯಾಗಿದೆ.

ಅರೆಬರೆ ಲಾಕ್‌ಡೌನ್ ಹೇರುವುದರ ಬಗ್ಗೆ ಹಲವು ಉದ್ಯಮಿಗಳು ಮತ್ತು ವ್ಯಾಪಾರಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ‘ನಿರ್ಬಂಧಿತ ಚಟುವಟಿಕೆಗಳಿಗೆ ಅವಕಾಶ ನೀಡಿರುವುದರಿಂದ ಯಾವ ವ್ಯಾಪಾರ ಮತ್ತು ಉದ್ಯಮವೂ ಸರಿಯಾಗಿ ನಡೆಯುತ್ತಿಲ್ಲ. ಇದರಿಂದ ನಷ್ಟವಾಗುತ್ತಿದೆ. ಹೀಗಾಗಿ 3–4 ವಾರ ಸಂಪೂರ್ಣ ಲಾಕ್‌ಡೌನ್ ಜಾರಿ ಮಾಡಬೇಕು. ನಂತರ ಎಲ್ಲಾ ಚಟುವಟಿಕೆಗಳನ್ನು ನಡೆಸಲು ಅವಕಾಶ ನೀಡಬೇಕು. ಜನರಲ್ಲಿ ಭಯ ಹೋಗಲಾಡಿಸಬೇಕು’ ಎಂದು ಈ ವರ್ಗದ ಜನರು ಹೇಳಿದ್ದಾರೆ.

‘ಕೋವಿಡ್ ವ್ಯಾಪಕವಾಗಿ ಹರಡದೇ ಇರುವ 687 ಜಿಲ್ಲೆಗಳ ಬಹುತೇಕ ಜನರು, ಲಾಕ್‌ಡೌನ್‌ನಂತಹ ಕ್ರಮದ ಅಗತ್ಯವಿಲ್ಲ. ಎಲ್ಲಾ ಸ್ವರೂಪದ ಆರ್ಥಿಕ ಚಟುವಟಿಕೆ ನಡೆಸಲು ಅವಕಾಶ ಮಾಡಿಕೊಡಬೇಕು. ಹೆಚ್ಚು ಪ್ರಕರಣಗಳು ಇರುವ 49 ಜಿಲ್ಲೆಗಳಿಂದ ಬರುವ ವಾಹನಗಳ ಮೇಲೆ ಮಾತ್ರ ನಿಗಾ ಇರಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ’ ಎಂದು ವರದಿಯಲ್ಲಿ ಹೇಳಲಾಗಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.