ADVERTISEMENT

ಮತ್ತೆ ನಗರಗಳ ಹಾದಿ ಹಿಡಿದ ವಲಸೆ ಕಾರ್ಮಿಕರು

ಸಮೀಕ್ಷೆಯಿಂದ ಮಾಹಿತಿ ಬಹಿರಂಗ: ಲಾಕ್‌ಡೌನ್‌ ಕಾರಣ ನಗರ ತೊರೆದು ಹಳ್ಳಿಗಳಿಗೆ ಪಯಣಿಸಿದ್ದರು

ಪಿಟಿಐ
Published 3 ಆಗಸ್ಟ್ 2020, 10:38 IST
Last Updated 3 ಆಗಸ್ಟ್ 2020, 10:38 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಕೊರೊನಾ ವೈರಾಣುವಿಗೆ ಕಡಿವಾಣ ಹಾಕಲು ಜಾರಿಗೊಳಿಸಲಾಗಿದ್ದ ಲಾಕ್‌ಡೌನ್‌ನಿಂದಾಗಿ ನಗರಗಳನ್ನು ತೊರೆದು ಹಳ್ಳಿ ಸೇರಿದ್ದ ವಲಸೆ ಕಾರ್ಮಿಕರ ಪೈಕಿ ಮೂರನೇ ಎರಡರಷ್ಟು ಮಂದಿ ಮತ್ತೆ ನಗರಗಳತ್ತ ಮುಖ ಮಾಡಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

ಹಳ್ಳಿಗಳಲ್ಲಿ ಕೌಶಲಪೂರ್ಣ ಉದ್ಯೋಗ ಸಿಗದ ಕಾರಣ ಬಹುತೇಕರು ನಗರಗಳತ್ತ ಮರು ವಲಸೆ ಕೈಗೊಳ್ಳುತ್ತಿದ್ದಾರೆ ಎಂದೂ ‘ಹೌ ಇಸ್‌ ದಿ ಹಿಂಟರ್‌ಲ್ಯಾಂಡ್‌ ಅನ್‌ಲಾಕಿಂಗ್‌‌’ ಎಂಬ ಹೆಸರಿನ ಅಧ್ಯಯನದಲ್ಲಿ ಹೇಳಲಾಗಿದೆ.

ಅಗಾ ಖಾನ್‌ ರೂರಲ್‌ ಸಪೋರ್ಟ್‌ ಪ್ರೋಗ್ರಾಮ್‌ (ಇಂಡಿಯಾ), ಆ್ಯಕ್ಷನ್‌ ಫಾರ್‌ ಸೋಷಿಯಲ್‌ ಅಡ್ವಾನ್ಸ್‌ಮೆಂಟ್‌, ಗ್ರಾಮೀಣ್‌ ಸಹರಾ, ಐ–ಸಕ್ಷಮ್‌, ಪ್ರಧಾನ್‌, ಸಾತಿ–ಯುಪಿ, ಶೇಷ್ಠಾ, ಸೇವಾ ಮಂದಿರ್‌ ಮತ್ತು ಟ್ರಾನ್ಸ್‌ಫಾರ್ಮ್‌ ರೂರಲ್‌ ಇಂಡಿಯಾ ಫೌಂಡೇಷನ್‌ ಜಂಟಿಯಾಗಿ ಈ ಸಮೀಕ್ಷೆ ನಡೆಸಿವೆ.

ADVERTISEMENT

11 ರಾಜ್ಯಗಳ 48 ಜಿಲ್ಲೆಗಳ 4,835 ಮನೆಗಳ ಸದಸ್ಯರನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. ಇದುಜೂನ್‌ 24ರಿಂದ ಜುಲೈ 8ರ ಅವಧಿಯಲ್ಲಿ ನಡೆದಿತ್ತು.

ಶೇಕಡ 29ರಷ್ಟು ಮಂದಿ ಈಗಾಗಲೇ ನಗರಗಳನ್ನು ಸೇರಿದ್ದಾರೆ. ಶೇಕಡ 45 ಮಂದಿ ಮತ್ತೆ ನಗರಗಳಿಗೆ ಹೋಗುವ ಬಗ್ಗೆ ಒಲವು ತೋರಿದ್ದಾರೆ ಎಂಬುದು ಅಧ್ಯಯನದ ಫಲಿತಾಂಶದಿಂದ ತಿಳಿದುಬಂದಿದೆ.

‘ನಗರಗಳಿಂದ ಬಂದವರ ಪೈಕಿ ಅನೇಕರು ಹಳ್ಳಿಗಳಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ. ನಾಲ್ಕನೇ ಒಂದು ಭಾಗದಷ್ಟು ಜನ ಇನ್ನೂ ಕೆಲಸ ಹುಡುಕುತ್ತಲೇ ಇದ್ದಾರೆ. ನಾಲ್ಕು ಮನೆಗಳ ಪೈಕಿ ಒಂದು ಮನೆಯವರು ತಮ್ಮ ಮಗುವನ್ನು ಶಾಲೆಗೆ ಕಳುಹಿಸದಿರುವ ಬಗ್ಗೆ ಚಿಂತಿಸುತ್ತಿದ್ದಾರೆ’ ಎಂಬುದೂ ಸಮೀಕ್ಷೆಯಿಂದ ತಿಳಿದು ಬಂದಿದೆ.

‘ಇತರೆ ಮನೆಗಳ ಮಹಿಳೆಯರಿಗೆ ಹೋಲಿಸಿದರೆ ನಗರದಿಂದ ವಾಪಸಾಗಿರುವ ವ್ಯಕ್ತಿಗಳ ಮನೆಯ ಹೆಂಗಸರಿಗೆ ಕೆಲಸದೊತ್ತಡ ಹೆಚ್ಚಾಗಿದೆ. ಶೇಕಡ 35ರಷ್ಟು ಮನೆಯವರು ನಿಗದಿತ ಕಾರ್ಯಕ್ರಮಗಳನ್ನು ಮುಂದೂಡಿದ್ದಾರೆ. ಶೇಕಡ 13ರಷ್ಟು ಮನೆಯವರು ಅತಿಥಿಗಳ ಸಂಖ್ಯೆಯನ್ನು ಕಡಿಮೆ ಮಾಡಿಕೊಂಡು ಕಾರ್ಯಕ್ರಮ ನಡೆಸಿದ್ದಾರೆ’ ಎಂದೂ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.