ADVERTISEMENT

ಬಿಹಾರ ರೈಲು ದುರಂತ: 2 ರೈಲುಗಳ ಸಂಚಾರ ರದ್ದು, 21 ರೈಲುಗಳ ಮಾರ್ಗ ಬದಲಾವಣೆ

ಪಿಟಿಐ
Published 12 ಅಕ್ಟೋಬರ್ 2023, 3:18 IST
Last Updated 12 ಅಕ್ಟೋಬರ್ 2023, 3:18 IST
<div class="paragraphs"><p> ದೆಹಲಿ–ಕಾಮಾಕ್ಯ ನಾರ್ತ್‌ ಈಸ್ಟ್‌ ಎಕ್ಸ್‌ಪ್ರೆಸ್‌ ಹಳಿತಪ್ಪಿರುವುದು</p></div>

ದೆಹಲಿ–ಕಾಮಾಕ್ಯ ನಾರ್ತ್‌ ಈಸ್ಟ್‌ ಎಕ್ಸ್‌ಪ್ರೆಸ್‌ ಹಳಿತಪ್ಪಿರುವುದು

   

ಪಿಟಿಐ ಚಿತ್ರ

ಬಕ್ಸರ್‌ (ಬಿಹಾರ): ದೆಹಲಿ–ಕಾಮಾಕ್ಯ ನಾರ್ತ್‌ ಈಸ್ಟ್‌ ಎಕ್ಸ್‌ಪ್ರೆಸ್‌ ರೈಲಿನ ಆರು ಬೋಗಿಗಳು ಬಿಹಾರದ ಬಕ್ಸರ್‌ ಜಿಲ್ಲೆಯ ರಘುನಾಥಪುರ ನಿಲ್ದಾಣದ ಬಳಿ ಹಳಿ ತಪ್ಪಿದ ನಂತರ ಭಾರತೀಯ ರೈಲ್ವೆಯು ಎರಡು ರೈಲುಗಳ ಸಂಚಾರವನ್ನು ರದ್ದುಗೊಳಿಸಿದ್ದು, 21 ರೈಲುಗಳ ಮಾರ್ಗವನ್ನು ಬದಲಾಯಿಸಿದೆ.

ADVERTISEMENT

ರಾತ್ರಿ ಸುಮಾರು 9.53ಕ್ಕೆ ಘಟನೆ ಸಂಭವಿಸಿದ್ದು, ಎಕ್ಸ್‌ಪ್ರೆಸ್‌ ರೈಲಿನ ಎಸಿ ಕೋಚ್ ಸೇರಿದಂತೆ ಆರು ಬೋಗಿಗಳು ಹಳಿತಪ್ಪಿವೆ. ಅಪಘಾತದಲ್ಲಿ ನಾಲ್ವರು ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ಬಕ್ಸರ್‌ ಪೊಲೀಸ್‌ ವರಿಷ್ಠಾಧಿಕಾರಿ ಮನೀಶ್‌ ಕುಮಾರ್‌ ತಿಳಿಸಿದ್ದಾರೆ.

ಘಟನೆಯಲ್ಲಿ ಸುಮಾರು 70 ಪ್ರಯಾಣಿಕರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗಳಿಗೆ ರವಾಸಿಸಲಾಗಿದೆ ಎಂದು ರೈಲ್ವೆ ಪೊಲೀಸ್‌ ಪಡೆ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕಾಶಿ ಪಾಟ್ನ ಜನ ಶತಾಬ್ದಿ ಎಕ್ಸ್‌ಪ್ರೆಸ್‌ (15125) ಮತ್ತು ಪಾಟ್ನ ಕಾಶಿ ಜನ ಶತಾಬ್ದಿ ಎಕ್ಸ್‌ಪ್ರೆಸ್‌ (15126) ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ಈಸ್ಟ್ ಸೆಂಟ್ರಲ್‌ ರೈಲ್ವೆ ವಲಯದ ಹೇಳಿಕೆ ತಿಳಿಸಿದೆ.

ಪುಣೆ–ದಾನಪುರ್‌ ಎಸ್‌ಎಫ್‌ ಎಕ್ಸ್‌ಪ್ರೆಸ್‌, ಪಟ್ಲಿಪುತ್ರ ಎಸ್‌ಎಫ್‌ ಎಕ್ಸ್‌ಪ್ರೆಸ್‌, ದಿಬ್ರುಗಢ ರಾಜಧಾನಿ ಎಕ್ಸ್‌ಪ್ರೆಸ್‌, ವಿಕ್ರಮಶಿಲಾ ಎಕ್ಸ್‌ಪ್ರೆಸ್‌, ರಾಜೇಂದ್ರ ನಗರ ಟರ್ಮಿನಲ್‌ ತೇಜಸ್‌ ರಾಜಧಾನಿ ಎಕ್ಸ್‌ಪ್ರೆಸ್‌ ಸೇರಿದಂತೆ ಒಟ್ಟು 21 ರೈಲುಗಳನ್ನು ಪರ್ಯಾಯ ಮಾರ್ಗಗಳಿಗೆ ಬದಲಾಯಿಸಲಾಗಿದೆ.

ದೆಹಲಿ–ಕಾಮಾಕ್ಯ ನಾರ್ತ್‌ ಈಸ್ಟ್‌ ಎಕ್ಸ್‌ಪ್ರೆಸ್‌ 23 ಬೋಗಿಗಳನ್ನು ಹೊಂದಿದ್ದು, ಬುಧವಾರ ಬೆಳಿಗ್ಗೆ ಸುಮಾರು 7.40 ಗಂಟೆಗೆ ದೆಹಲಿಯ ಆನಂದ್‌ ವಿಹಾರ್‌ ಟರ್ಮಿನಲ್‌ನಿಂದ ಕಾಮಾಕ್ಯಕ್ಕೆ ಹೊರಟಿತ್ತು.

ಘಟನೆ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ‘ಬಕ್ಸರ್‌ನ ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌, ಜಿಲ್ಲಾಡಳಿತ, ರೈಲ್ವೆ ಅಧಿಕಾರಿಗಳು ಮತ್ತು ಸ್ಥಳೀಯ ನಿವಾಸಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಶೀಘ್ರದಲ್ಲೆ ರಕ್ಷಣಾ ಕಾರ್ಯಾಚರಣೆ ಪೂರ್ಣಗೊಳ್ಳಲಿದ್ದು, ನಂತರ ಹಳಿಗಳ ಮರುಸ್ಥಾಪನೆ ಕಾರ್ಯ ನಡೆಯಲಿದೆ’ ಎಂದು ತಿಳಿಸಿದ್ದಾರೆ.

‘ಜನರಿಗೆ ತ್ವರಿತ ಪರಿಹಾರವನ್ನು ಒದಗಿಸಲು ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ವಿಪತ್ತು ನಿರ್ವಹಣೆ ಮತ್ತು ಆರೋಗ್ಯ ಇಲಾಖೆಗಳಿಗೆ ತಿಳಿಸಲಾಗಿದೆ. ಬಕ್ಸರ್‌ ಮತ್ತು ಭೋಜಪುರದ ಜಿಲ್ಲಾಧಿಕಾರಿಗಳ ಬಳಿಯೂ ಮಾತನಾಡಿದ್ದೇನೆ ಮತ್ತು ಶೀಘ್ರದಲ್ಲೆ ಸ್ಥಳಕ್ಕೆ ತಲುಪಲು, ಪರಿಹಾರ ಕಾರ್ಯವನ್ನು ವೇಗಗೊಳಿಸಲು ಸೂಚನೆಗಳನ್ನು ನೀಡಿದ್ದೇನೆ’ ಎಂದು ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.