ನವದೆಹಲಿ: ಏಕರೂಪ ನಾಗರಿಕ ಸಂಹಿತೆಯು (ಯುಸಿಸಿ) ದೇಶವನ್ನು ‘ಶಾಶ್ವತವಾಗಿ ಧ್ರುವೀಕರಣದ’ ಸ್ಥಿತಿಯಲ್ಲಿ ಇರಿಸಲು ಒಂದು ರಾಜಕೀಯ ಅಸ್ತ್ರವಾಗಬಾರದು ಎಂದು ಕಾಂಗ್ರೆಸ್ ಗುರುವಾರ ಹೇಳಿದೆ.
ನಿಜವಾದ ಸಹಮತವನ್ನು ಮೂಡಿಸುವ ಉದ್ದೇಶದಿಂದ ವ್ಯಾಪಕ ಸಮಾಲೋಚನೆ ನಡೆಸಿದ ನಂತರವೇ ಯುಸಿಸಿ ಜಾರಿಗೆ ತರಲು ಸಾಧ್ಯ ಎಂದು ಕಾಂಗ್ರೆಸ್ ಅಭಿಪ್ರಾಯಪಟ್ಟಿದೆ.
ಉತ್ತರಾಖಂಡದಲ್ಲಿ ಆಡಳಿತಾರೂಢ ಬಿಜೆಪಿಯು ಯುಸಿಸಿಯನ್ನು ಜಾರಿಗೆ ತಂದ ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಪಕ್ಷವು ಈ ಮಾತು ಹೇಳಿದೆ. ಯುಸಿಸಿಯ ಅಗತ್ಯದ ಬಗ್ಗೆ ಅಧ್ಯಯನ ನಡೆಸಲು ಹಾಗೂ ಕರಡು ಮಸೂದೆಯನ್ನು ಸಿದ್ಧಪಡಿಸಲು ಗುಜರಾತ್ ಸರ್ಕಾರವು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ಸಮಿತಿ ರಚಿಸಿದೆ.
ಉತ್ತರಾಖಂಡದಲ್ಲಿ ರೂಪಿಸಿರುವ ಯುಸಿಸಿ ನಿಯಮಗಳು ಪರಿಣಾಮಕಾರಿಯಾಗಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂವಹನ ವಿಭಾಗ) ಜೈರಾಮ್ ರಮೇಶ್ ಅವರು ಹೇಳಿದ್ದಾರೆ. ‘ಕೌಟುಂಬಿಕ ಕಾನೂನುಗಳ ಬಗ್ಗೆ ಕಳೆದ ಒಂದು ದಶಕದ ಅವಧಿಯಲ್ಲಿ ವ್ಯಕ್ತವಾದ ಕಳವಳಗಳ ಬಗ್ಗೆ ಈ ಕಾನೂನು ಸ್ಪಂದಿಸುವ ಕೆಲಸ ಮಾಡಿಲ್ಲ. ಬಿಜೆಪಿಯ ವಿಭಜನಕಾರಿ ಕಾರ್ಯಸೂಚಿಯ ಭಾಗವಾಗಿ ಇದನ್ನು ಬಲವಂತದಿಂದ ಹೇರಲಾಗಿದೆ’ ಎಂದು ರಮೇಶ್ ಅವರು ಹೇಳಿದ್ದಾರೆ.
ಸಂವಿಧಾನದ 44ನೆಯ ವಿಧಿಯಲ್ಲಿ ಹೇಳಿರುವಂತಹ ಏಕರೂಪ ನಾಗರಿಕ ಸಂಹಿತೆಯು, ದೇಶದಲ್ಲಿ ನಿಜವಾದ ಸಹಮತ ಮೂಡಿಸುವ ಉದ್ದೇಶದಿಂದ ವಿಸ್ತೃತ ಚರ್ಚೆಗಳು, ಮಾತುಕತೆಗಳು ನಡೆದ ನಂತರವಷ್ಟೇ ರೂಪುಗೊಳ್ಳಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.