ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ
ಪಿಟಿಐ ಚಿತ್ರ
ಡೆಹ್ರಾಡೂನ್: ಏಕರೂಪ ನಾಗರಿಕ ಸಂಹಿತೆಯು (ಯುಸಿಸಿ) ರಾಜ್ಯದಲ್ಲಿ ನಾಳೆಯಿಂದ (ಜನವರಿ 27 ರಂದು) ಜಾರಿಗೆ ಬರಲಿದೆ. ಉತ್ತರಾಖಂಡವು, ಈ ಕಾನೂನನ್ನು ಕಾರ್ಯರೂಪಕ್ಕೆ ತಂದ ಮೊದಲ ರಾಜ್ಯವಾಗಲಿದೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ.
ಕಾನೂನು ಜಾರಿಗೆ ಸಂಬಂಧಿಸಿದ ಎಲ್ಲ ನಿಯಮಗಳಿಗೆ ಅನುಮೋದನೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ತರಬೇತಿ ನೀಡುವುದೂ ಸೇರಿದಂತೆ ಯುಸಿಸಿ ಅನುಷ್ಠಾನಗೊಳಿಸಲು ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಪ್ರಕಟಿಸಿದ್ದಾರೆ.
ಈ ಕಾನೂನು, ಎಲ್ಲ ನಾಗರಿಕರಿಗೆ ಸಮಾನ ಹಕ್ಕು ಮತ್ತು ಜವಾಬ್ದಾರಿಯನ್ನು ಖಾತ್ರಿಪಡಿಸುತ್ತದೆ. ಸಮಾಜದಲ್ಲಿ ಏಕರೂಪತೆ ತರಲಿದೆ ಎಂದು ಪ್ರತಿಪಾದಿಸಿದ್ದಾರೆ.
'ಭಾರತವನ್ನು ಅಭಿವೃದ್ಧಿ ಹೊಂದಿದ, ಸಂಘಟಿತ, ಸಾಮರಸ್ಯದಿಂದ ಕೂಡಿದ ಹಾಗೂ ಸ್ವಾವಲಂಬಿ ರಾಷ್ಟ್ರವನ್ನಾಗಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಡುತ್ತಿರುವ ಮಹಾನ್ ಯಾಗಕ್ಕೆ, ರಾಜ್ಯವು ಈ ಕಾನೂನು ಜಾರಿಯನ್ನು ಸಮರ್ಪಿಸಲಿದೆ' ಎಂದು ಹೇಳಿದ್ದಾರೆ.
'ಜಾತಿ, ಧರ್ಮ ಮತ್ತು ಲಿಂಗದ ಆಧಾರದ ಮೇಲಿನ ತಾರತಮ್ಯಕ್ಕೆ ಕಾರಣವಾಗುವ ವಿಷಯಗಳಿಗೆ ಸಂಬಂಧಿಸಿದ ಪ್ರತಿಯೊಂದು ಕಾನೂನುಗಳಲ್ಲಿ ಏಕರೂಪತೆಯನ್ನು ತರಲು ಯುಸಿಸಿ ಅಡಿಯಲ್ಲಿ ಪ್ರಯತ್ನಿಸಲಾಗಿದೆ' ಎಂದಿರುವ ಅವರು, 'ಯುಸಿಸಿಯನ್ನು ದೇಶದಾದ್ಯಂತ ಜಾರಿಗೆ ತರಬೇಕು ಎಂಬುದು ಬಿಜೆಪಿಯ ರಾಷ್ಟ್ರೀಯ ಕಾರ್ಯಸೂಚಿಯಾಗಿದೆ. ಆದರೆ, ಉತ್ತರಾಖಂಡ ಸರ್ಕಾರವು ಇದನ್ನು ಜಾರಿಗೊಳಿಸಲು 2024ರ ಲೋಕಸಭಾ ಚುನಾವಣೆಗೂ ಮೊದಲೇ ಹೆಜ್ಜೆ ಇಟ್ಟಿತ್ತು. ಇದೀಗ, ಬಿಜೆಪಿ ಆಡಳಿತವಿರುವ ಇತರ ರಾಜ್ಯಗಳಿಗೆ ಮಾದರಿಯಾಗಲಿದೆ' ಎಂದು ಹೇಳಿಕೊಂಡಿದ್ದಾರೆ.
ಉತ್ತರಾಖಂಡದಲ್ಲಿ ಸತತ ಎರಡನೇ ಅವಧಿಗೆ ಅಧಿಕಾರದಲ್ಲಿರುವ ಬಿಜೆಪಿಯು, 2022ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ, ಯುಸಿಸಿ ಜಾರಿಯನ್ನು ಪ್ರಚಾರದ ಪ್ರಮುಖ ವಿಚಾರವನ್ನಾಗಿಸಿಕೊಂಡಿತ್ತು.
ಧಾಮಿ ನೇತೃತ್ವದ ಉತ್ತರಾಖಂಡ ಸರ್ಕಾರವು ಯುಸಿಸಿ ಜಾರಿಗೆ ಕಳೆದವಾರ ಅನುಮೋದನೆ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.