ADVERTISEMENT

ಶಿವಸೇನಾದ 12 ಬಂಡಾಯ ಶಾಸಕರ ಅನರ್ಹತೆಗೆ ಯತ್ನ?

​ಪ್ರಜಾವಾಣಿ ವಾರ್ತೆ
Published 24 ಜೂನ್ 2022, 3:49 IST
Last Updated 24 ಜೂನ್ 2022, 3:49 IST
   

ಮುಂಬೈ: ಶಿವಸೇನಾದ ಬಂಡಾಯ ನಾಯಕ ಏಕನಾಥ ಶಿಂಧೆ ಅವರೊಂದಿಗೆ ಗುರುತಿಸಿಕೊಂಡಿರುವ ಸುಮಾರು 12 ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರ ಬಳಗ ಮಹಾರಾಷ್ಟ್ರದ ವಿಧಾನಸಭೆಯ ಉಪ ಸ್ಪೀಕರ್‌ಗೆ ಮನವಿ ಸಲ್ಲಿಸಲು ಚಿಂತಿಸಿದೆ.

ವಿಧಾನಸಭೆಯಲ್ಲಿ ಶಿವಸೇನಾ ಪಕ್ಷವನ್ನು ವಿಭಜಿಸುವುದಕ್ಕೆ ಅಗತ್ಯವಿರುವ 37 ಶಾಸಕರ ಸಂಖ್ಯೆಯನ್ನು ಗುವಾಹಟಿಯಲ್ಲಿರುವ ಬಂಡಾಯ ಗುಂಪು ಹೊಂದಿದೆ. ಈ ಮೂಲಕ ಅವರು ಪಕ್ಷಾಂತರ ನಿಷೇಧ ಕಾಯ್ದೆಯ ಅನರ್ಹತೆಯ ತೂಗುಕತ್ತಿಯಿಂದ ಪಾರಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಇನ್ನು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅವರು, ‘ಎಂವಿಎ ಸರ್ಕಾರದ ಭವಿಷ್ಯವನ್ನು ವಿಧಾನಸಭೆಯ ಮಹಡಿಯಲ್ಲಿ ನಿರ್ಧರಿಸಲಾಗುತ್ತದೆಯೇ ಹೊರತು ಗುವಾಹಟಿಯಲ್ಲಿ ಅಲ್ಲ’ ಎಂದು ಹೇಳಿದ್ದಾರೆ. ಅಲ್ಲದೆ ಶಿವಸೇನಾದ ಬಂಡಾಯ ಶಾಸಕರ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಅವರು ದೂರಿದ್ದಾರೆ.

ADVERTISEMENT

‘ನಮ್ಮ ಬಂಡಾಯವನ್ನು ರಾಷ್ಟ್ರೀಯ ಪಕ್ಷವೊಂದು ಬೆಂಲಿಸಿದ್ದು, ಅಗತ್ಯ ನೆರವು ನೀಡುವ ಭರವಸೆ ನೀಡಿದೆ’ ಎಂದು ಶಿಂಧೆ ಅವರು ಗುವಾಹಟಿಯಲ್ಲಿ ಬಂಡಾಯ ಶಾಸಕರನ್ನು ಉದ್ದೇಶಿಸಿ ಮಾತನಾಡಿದ ವಿಡಿಯೊ ಬಹಿರಂಗವಾದ ಬೆನ್ನಲ್ಲೇ ಶರದ್‌ ಪವಾರ್‌ ಅವರು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

‘ಗುವಾಹಟಿಯಲ್ಲಿರುವ ಶಾಸಕರ ಪೈಕಿ 18ರಿಂದ 20 ಮಂದಿ ನಮ್ಮ ಸಂಪರ್ಕದಲ್ಲಿದ್ದಾರೆ’ ಎಂದು ಶಿವಸೇನಾದ ವಕ್ತಾರ ಸಂಜಯ್‌ ರಾವುತ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.