ADVERTISEMENT

ಶಿವಸೇನಾ ಉಳಿಸಿಕೊಳ್ಳಲು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಉದ್ಧವ್ ಠಾಕ್ರೆ ಬಣ

ಐಎಎನ್ಎಸ್
Published 25 ಜುಲೈ 2022, 9:12 IST
Last Updated 25 ಜುಲೈ 2022, 9:12 IST
ಉದ್ಧವ್ ಠಾಕ್ರೆ - ಐಎಎನ್‌ಎಸ್ ಚಿತ್ರ
ಉದ್ಧವ್ ಠಾಕ್ರೆ - ಐಎಎನ್‌ಎಸ್ ಚಿತ್ರ   

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರ ಬಣವನ್ನು ನೈಜ ಶಿವಸೇನಾ ಎಂದು ಗುರುತಿಸುವ ಭಾರತೀಯ ಚುನಾವಣಾ ಆಯೋಗದ ಪ್ರಕ್ರಿಯೆಗೆ ತಡೆಯೊಡ್ಡಬೇಕು ಎಂದು ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಣ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.

ಶಿವಸೇನಾ ಪ್ರಧಾನ ಕಾರ್ಯದರ್ಶಿ ಸುಭಾಷ್ ದೇಸಾಯಿ ಅವರು ಅರ್ಜಿ ಸಲ್ಲಿಸಿದ್ದಾರೆ. ಪ್ರತಿವಾದಿಗಳು ‘ಚುನಾವಣಾ ಚಿಹ್ನೆಗಳ (ಮೀಸಲು ಮತ್ತು ಹಂಚಿಕೆ) ಆದೇಶ 1968’ರ 15ನೇ ನಿಯಮದ ಅಡಿಯಲ್ಲಿ ಚುನಾವಣಾ ಆಯೋಗದಿಂದ ಶಿವಸೇನಾ ಎಂದು ಮಾನ್ಯತೆ ಪಡೆಯುವ ಪ್ರಕ್ರಿಯೆ ಆರಂಭಿಸಿದ್ದಾರೆ. ಜತೆಗೆ ಶಿವಸೇನಾಗೆ ಹಂಚಿಕೆ ಮಾಡಿರುವ ಚಿಹ್ನೆಯನ್ನು ಚುನಾವಣಾ ಚಿಹ್ನೆಯಾಗಿ ಬಳಸಿಕೊಳ್ಳುವುದಾಗಿ ಪ್ರತಿಪಾದಿಸಿದ್ದಾರೆ ಎಂದು ಸುಭಾಷ್ ದೇಸಾಯಿ ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

10ನೇ ವಿಧಿಯಡಿ ಶಾಸಕರ ಅನರ್ಹತೆಗೆ ಸಂಬಂಧಿಸಿದ ಯಾವುದೇ ಪ್ರಕ್ರಿಯೆಯನ್ನು ಮುಂದುವರಿಸಬಾರದು ಎಂದು ಮಹಾರಾಷ್ಟ್ರದ ವಿಧಾನಸಭೆ ಸ್ಪೀಕರ್‌ಗೆ ಸುಪ್ರೀಂ ಕೋರ್ಟ್‌ ಜುಲೈ 20ರಂದು ಸೂಚಿಸಿತ್ತು. ಆದರೆ, ಜುಲೈ 22ರಂದು ಚುನಾವಣಾ ಆಯೋಗ ತನ್ನ ಪ್ರಕ್ರಿಯೆ ಆರಂಭಿಸಿದೆ. ಶಾಸಕರ ಅನರ್ಹತೆಗೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ನಿಂದ ಅಂತಿಮ ತೀರ್ಪು ಪ್ರಕಟವಾಗುವವರೆಗೆ ಆಯೋಗದ ಪ್ರಕ್ರಿಯೆಗಳನ್ನು ತಡೆಹಿಡಿಯಬೇಕು ಎಂದು ಉದ್ಧವ್ ಬಣ ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಮಾಡಿದೆ.

ಪ್ರಕರಣವು ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವುದರಿಂದ ಯಾವುದೇ ಪ್ರಕ್ರಿಯೆಗಳನ್ನು ಮುಂದುವರಿಸಬಾರದು ಎಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಲಾಗಿತ್ತು. ಆದರೆ, ಆಯೋಗವು ಚಿಹ್ನೆಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಆರಂಭಿಸಿದೆ ಎಂದು ಉದ್ಧವ್ ಬಣ ದೂರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.