ಮುಂಬೈ: ವಕ್ಫ್ ತಿದ್ದುಪಡಿ ಮಸೂದೆಗೆ ಉದ್ಧವ್ ಠಾಕ್ರೆ ನೇತ್ರತ್ವದ ಶಿವಸೇನಾ ವಿರೋಧ ವ್ಯಕ್ತಪಡಿಸಿರುವುದಕ್ಕೆ ಕಿಡಿಕಾರಿರುವ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ ಶಿಂದೆ, ರಾಹುಲ್ ಗಾಂಧಿ ಪ್ರಭಾವದಿಂದಾಗಿ ಬಾಳಾ ಸಾಹೇಬ್ ಸಿದ್ದಾಂತದಿಂದ ಉದ್ಥವ್ ಠಾಕ್ರೆ ದೂರ ಸರಿದಿದ್ದಾರೆ ಎಂದು ಹೇಳಿದ್ದಾರೆ.
ಮಸೂದೆ ವಿಚಾರವಾಗಿ ಶಿವಸೇನಾ(ಯುಬಿಟಿ) ನಿಲುವನ್ನು ಪ್ರಶ್ನಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿಂದೆ, ಉದ್ಧವ್ ಠಾಕ್ರೆಯವರು ಬಾಳಾಸಾಹೇಬರ ಆದರ್ಶಗಳನ್ನು ಎತ್ತಿಹಿಡಿಯುತ್ತಾರೆಯೇ? ಅಥವಾ ರಾಹುಲ್ ಗಾಂಧಿಯವರ ಸೂಚನೆಗಳನ್ನು ಅನುಸರಿಸುತ್ತಾರೆಯೇ? ಎಂದು ಕೇಳಿದ್ದಾರೆ.
‘ವಕ್ಫ್ ಮಸೂದೆಯಿಂದ ಮತಬ್ಯಾಂಕ್ ರಾಜಕೀಯದಲ್ಲಿ ತೊಡಗಿರುವವರ ನಿಜವಾದ ಮುಖಗಳು ಬಹಿರಂಗಗೊಂಡಿವೆ’ ಎಂದು ಅವರು ಕಿಡಿಕಾರಿದ್ದಾರೆ.
‘ಮತಕ್ಕೋಸ್ಕರ ಅವಕಾಶವಾದಿ ರಾಜಕೀಯದಲ್ಲಿ ನಾವು ಎಂದಿಗೂ ತೊಡಗಿಕೊಂಡಿಲ್ಲ. ಹಿಂದೂ ಹೃದಯ ಸಾಮ್ರಾಟ್ ಬಾಳಾಸಾಹೇಬ್ ಠಾಕ್ರೆ ಮತ್ತು ಧರ್ಮವೀರ್ ಆನಂದ್ ದಿಘೆ ಅವರ ಸಿದ್ಧಾಂತಕ್ಕೆ ನಮ್ಮ ಬದ್ಧತೆ ದೃಢವಾಗಿದೆ. ಅಧಿಕಾರಕ್ಕಾಗಿ ನಾವು ನಮ್ಮ ತತ್ವಗಳನ್ನು ರಾಜಿ ಮಾಡಿಕೊಂಡಿಲ್ಲ’ ಎಂದಿದ್ದಾರೆ.
ಇದೇ ವೇಳೆ ವಕ್ಫ್ ತಿದ್ದುಪಡಿ ಮಸೂದೆ ಬೆಂಬಲಿಸಿ ಮಾತನಾಡಿದ ಅವರು, ಕೆಲವರ ನಿಯಂತ್ರಣದಲ್ಲಿದ್ದ ವಕ್ಫ್ ಮಂಡಳಿ ಆಸ್ತಿಯನ್ನು ಎಲ್ಲರ ಹಿತಕ್ಕಾಗಿ ಬಳಸುವ ಉದ್ದೇಶ ಈ ಮಸೂದೆ ಹೊಂದಿದೆ. ಹಿಂದುಳಿದ ಮುಸ್ಲಿಮರ ಅನುಕೂಲಕ್ಕೆ ಇದು ಸಹಾಯ ಮಾಡುತ್ತದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.