ADVERTISEMENT

ಯುಡಿಎಫ್‌: ಚುನಾವಣೆ ನಂತರವೇ ಮುಖ್ಯಮಂತ್ರಿ ಅಭ್ಯರ್ಥಿ ನಿರ್ಧಾರ

ಕಾಂಗ್ರೆಸ್ ಹಿರಿಯ ನಾಯಕ ಎ.ಕೆ.ಆಂಟನಿ ಸ್ಪಷ್ಟನೆ

ಪಿಟಿಐ
Published 29 ಮಾರ್ಚ್ 2021, 10:38 IST
Last Updated 29 ಮಾರ್ಚ್ 2021, 10:38 IST
ಎ.ಕೆ.ಆಂಟನಿ (ಸಂಗ್ರಹ ಚಿತ್ರ)
ಎ.ಕೆ.ಆಂಟನಿ (ಸಂಗ್ರಹ ಚಿತ್ರ)   

ತಿರುವನಂತಪುರ: ‘ಏಪ್ರಿಲ್ 6ರ ವಿಧಾನಸಭಾ ಚುನಾವಣೆಯ ನಂತರ ಕಾಂಗ್ರೆಸ್‌ ನೇತೃತ್ವದ ಸಂಯುಕ್ತ ಪ್ರಜಾತಾಂತ್ರಿಕ ರಂಗದ (ಯುಡಿಎಫ್) ಮೈತ್ರಿ ಕೂಟ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದೆ‘ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಎ.ಕೆ.ಆಂಟನಿ ಸೋಮವಾರ ಹೇಳಿದರು.

‘ಚುನಾವಣೆಯ ನಂತರ ಮುಖ್ಯಮಂತ್ರಿ ಅಭ್ಯರ್ಥಿಯ ಬಗ್ಗೆ ಯುಡಿಎಫ್‌ ನಾಯಕರು ಸರ್ವಾನುಮತದಿಂದ ನಿರ್ಣಯ ತೆಗೆದುಕೊಳ್ಳಲಿದ್ದಾರೆ’ ಎಂದು ಅವರು ಹೇಳಿದರು.

ಇತ್ತೀಚೆಗೆ ನಡೆದ ಕಾಂಗ್ರೆಸ್‌ ಹೈಕಮಾಂಡ್ ಸಭೆಯಲ್ಲಿ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷ ಮುನ್ನಡೆಸುವ ಜವಾಬ್ದಾರಿಯನ್ನು ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರಿಗೆ ವಹಿಸಲು ನಿರ್ಧಾರ ತೆಗದುಕೊಂಡ ಹಿನ್ನೆಲೆಯಲ್ಲಿ ಹಿರಿಯ ನಾಯಕ ಆಂಟನಿ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ADVERTISEMENT

ಚಾಂಡಿ ಅವರ ಅಧ್ಯಕ್ಷತೆಯ 10 ಸದಸ್ಯರ ಚುನಾವಣಾ ನಿರ್ವಹಣೆ ಮತ್ತು ಕಾರ್ಯತಂತ್ರ ಸಮಿತಿಯನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಜನವರಿಯಲ್ಲಿ ಅನುಮೋದಿಸಿದ್ದರು. ಹಿರಿಯ ನಾಯಕ ರಮೇಶ್ ಚೆನ್ನಿತ್ತಾಲ ಕಳೆದ ಐದು ವರ್ಷಗಳಲ್ಲಿ ಪ್ರತಿಪಕ್ಷದ ನಾಯಕರಾಗಿ ರಾಜ್ಯ ವಿಧಾನಸಭೆಯಲ್ಲಿ ಪಕ್ಷವನ್ನು ಮುನ್ನಡೆಸುತ್ತಿದ್ದರೂ ಚಾಂಡಿ ಅವರಿಗೆ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಜವಾಬ್ದಾರಿ ವಹಿಸಿದ್ದರಿಂದ ರಾಜ್ಯದಲ್ಲಿ ಯುಡಿಎಫ್‌ ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆ ವದಂತಿಗಳು ಹರಡಲು ಕಾರಣವಾಯಿತು.

‘ಪಕ್ಷದ ನಾಯಕತ್ವ ಸೇರಿದಂತೆ ಎಲ್ಲ ವದಂತಿಗಳನ್ನು ಪಕ್ಷ ಬದಿಗಿಟ್ಟಿದೆ. ಈಗ ಚುನಾವಣೆಯಲ್ಲಿ ಯುಡಿಎಫ್‌ ಗೆಲುವನ್ನು ಖಾತರಿಪಡಿಸುವುದರ ಬಗ್ಗೆ ಪಕ್ಷ ಗಮನ ಹರಿಸುತ್ತಿದೆ. ಚುನಾವಣೆ ನಂತರ ಬೇರೆ ವಿಚಾರಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ‘ ಎಂದು ಆಂಟನಿ ಸ್ಪಷ್ಟಪಡಿಸಿದರು.

‘ನಿಮ್ಮ ಮುಂದಿನ ರಾಜಕೀಯ ಯೋಜನೆಗಳ ಬಗ್ಗೆ ಹೇಳಿ‘ ಎಂದು ಪತ್ರಕರ್ತರು ಕೇಳಿದಾಗ, ‘ನಾನು 2004 ರಲ್ಲೇ ಚುನಾವಣೆ ಸ್ಪರ್ಧೆಯಿಂದ ದೂರವಿದ್ದೇನೆ. 2022 ರ ವೇಳೆಗೆ ರಾಜ್ಯಸಭಾ ಸದಸ್ಯತ್ವದ ಅವಧಿ ಪೂರ್ಣಗೊಳ್ಳುತ್ತದೆ. ಅಲ್ಲಿಂದ ಸಂಸದೀಯ ರಾಜಕೀಯವನ್ನೂ ಕೊನಗೊಳಿಸುತ್ತೇನೆ‘ ಎಂದು ಆಂಟನಿ ಹೇಳಿದರು.

ಇದೇ ವೇಳೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಆಂಟನಿ, ‘ಕೇರಳದ ಸಿಪಿಎಂ ಪಕ್ಷ ಈಗ ಕೇವಲ ವಿಜಯನ್ ಅವರ ಪಕ್ಷವಾಗಿಬಿಟ್ಟಿದೆ‘ ಎಂದು ಆರೋಪಿಸಿದರು. ‘ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರಶ್ನಾತೀತ ನಾಯಕ ಇರಬಾರದು‘ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.