ನವದೆಹಲಿ : ಡೀಮ್ಡ್ ವಿಶ್ವವಿದ್ಯಾಲಯಗಳು ವೈದ್ಯಕೀಯ ಮತ್ತು ದಂತ ವೈದ್ಯಕೀಯ ಶಿಕ್ಷಣ ಕೋರ್ಸ್‌ಗಳಿಗೆ ವಿಧಿಸುವ ಅತಿಯಾದ ಶುಲ್ಕ ನಿಯಂತ್ರಿಸಲು ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ಸಮಿತಿ ರಚಿಸಿರುವುದಾಗಿ ರಾಜ್ಯಸಭೆಗೆ ಸರ್ಕಾರ ತಿಳಿಸಿದೆ.
ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ರಾಜ್ಯ ಸಚಿವ ಸತ್ಯಪಾಲ್ ಸಿಂಗ್ ಅವರು ಲಿಖಿತ ಪ್ರಶ್ನೆಗೆ ಉತ್ತರಿಸುವಾಗ ಈ ವಿಷಯ ತಿಳಿಸಿದರು.
ಸಮಿತಿಯು ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಎಐಐಎಂಸ್–ಏಮ್ಸ್) ಮಾಜಿ ನಿರ್ದೇಶಕರಾದ ಆರ್.ಸಿ.ದೇಕಾ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಹಣಕಾಸು ಸಲಹೆಗಾರ ಮತ್ತು ಮಾಜಿ ಹೆಚ್ಚುವರಿ ಕಾರ್ಯದರ್ಶಿ ಎಸ್.ಕೆ.ರಾಯ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾ, ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ (ಎಂಸಿಐ), ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಿಂದ ತಲಾ ಒಬ್ಬರಂತೆ ನಾಮನಿರ್ದೇಶಿತರಾದ ಸದಸ್ಯರನ್ನು ಒಳಗೊಂಡಿದೆ.
ರೋಹ್ಟಕ್‌ನ ಪಿಟಿ ಬಿ.ಡಿ.ಶರ್ಮಾ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಒ.ಪಿ.ಕಲ್ರಾ, ಲಖನೌ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಸರೋಜ್ ಚೂರಾಮಣಿ ಗೋಪಾಲ್, ನವದೆಹಲಿಯ ಮೌಲಾನ ಆಜಾದ್ ದಂತ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಮಹೇಶ್ ವರ್ಮ, ಪುಣೆಯ ಬೈರಮ್‌ಜಿ ಜೀಜೀಭಾಯ್ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಸಾಸೂನ್ ಜನರಲ್ ಆಸ್ಪತ್ರೆಯ ಡೀನ್ ಅಜಯ್ ಸಿ.ಚಂದನ್‌ವಾಲೆ ಈ ಸಮಿತಿಯ ಸದಸ್ಯರಾಗಿದ್ದಾರೆ.
ಉನ್ನತ ಶಿಕ್ಷಣ ಪರೀಕ್ಷೆ ಸುಧಾರಣೆಗೆ ಸಮಿತಿ:ಉನ್ನತ ಶಿಕ್ಷಣ ಕಲಿಕಾ ಸಂಸ್ಥೆಗಳಲ್ಲಿ ಪರೀಕ್ಷಾ ಸುಧಾರಣೆಗೆ ಶಿಫಾರಸು ಮಾಡಲು ವಿಶ್ವವಿದ್ಯಾಲಯ ಅನುದಾನ ಆಯೋಗದಿಂದ (ಯುಜಿಸಿ) ಸಮಿತಿ ರಚಿಸಿರುವುದಾಗಿ ಸರ್ಕಾರ ರಾಜ್ಯಸಭೆಗೆ ಗುರುವಾರ ತಿಳಿಸಿದೆ.
ರಾಜಸ್ಥಾನದ ಸೆಂಟ್ರಲ್ ಯೂನಿರ್ವಸಿಟಿಯ ವಿಶ್ರಾಂತ ಕುಲಪತಿ ಎಂ.ಎಂ.ಸಾಳುಂಕೆ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಇದೇ ವರ್ಷದ ಅಕ್ಟೋಬರ್ ಒಳಗೆ ವರದಿ ಸಲ್ಲಿಸಲು ಈ ಸಮಿತಿಗೆ ಸೂಚಿಸಲಾಗಿದೆ ಎಂದು ಸಚಿವ ಸತ್ಯಪಾಲ್ ಸಿಂಗ್, ಲಿಖಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.