ADVERTISEMENT

ಸಹಾಯಕ ಪ್ರಾಧ್ಯಾಪಕರ ನೇಮಕಕ್ಕೆ ಪಿಎಚ್‌.ಡಿ ಕಡ್ಡಾಯವಲ್ಲ: ಯುಜಿಸಿ

ಎನ್‌ಇಟಿ, ಎಸ್‌ಇಟಿ, ಎಸ್‌ಎಲ್‌ಇಟಿ ಕನಿಷ್ಠ ಮಾನದಂಡ

ಪಿಟಿಐ
Published 5 ಜುಲೈ 2023, 23:30 IST
Last Updated 5 ಜುಲೈ 2023, 23:30 IST
ಯುಜಿಸಿ ಲಾಂಛನ
ಯುಜಿಸಿ ಲಾಂಛನ   

ನವದೆಹಲಿ: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಹಾಯಕ ಪ್ರಾಧ್ಯಾಪಕರ ನೇಮಕಕ್ಕೆ ಪಿಎಚ್‌.ಡಿ ಕಡ್ಡಾಯಗೊಳಿಸಿದ್ದ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ತನ್ನ ನಿರ್ಧಾರದಿಂದ ಹಿಂದೆ ಸರಿದಿದ್ದು, ಈ ಹುದ್ದೆಗಳ ನೇರ ನೇಮಕಾತಿಗೆ ಎನ್‌ಇಟಿ, ಎಸ್‌ಇಟಿ ಮತ್ತು ಎಸ್‌ಎಲ್‌ಇಟಿ ಪರೀಕ್ಷೆಗಳನ್ನು ಕನಿಷ್ಠ ಅರ್ಹತಾ ಮಾನದಂಡ ಎಂದು ಪ್ರಕಟಿಸಿದೆ.

‘ಸಹಾಯಕ ಪ್ರಾಧ್ಯಾಪಕರ ನೇಮಕಕ್ಕೆ ಪಿಎಚ್‌.ಡಿ ಅರ್ಹತೆಯು ಐಚ್ಛಿಕವಾಗಿ ಮುಂದುವರಿಯುತ್ತದೆ. ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್‌ಇಟಿ), ರಾಜ್ಯ ಅರ್ಹತಾ ಪರೀಕ್ಷೆ (ಎಸ್‌ಇಟಿ) ಮತ್ತು ರಾಜ್ಯ ಮಟ್ಟದ ಅರ್ಹತಾ ಪರೀಕ್ಷೆ (ಎಸ್‌ಎಲ್‌ಇಟಿ) ಕನಿಷ್ಠ ಅರ್ಹತಾ ಮಾನದಂಡ ಆಗಿರುತ್ತದೆ’ ಎಂದು ಯುಜಿಸಿ ಅಧ್ಯಕ್ಷ ಎಂ. ಜಗದೀಶ್‌ ಕುಮಾರ್‌ ತಿಳಿಸಿದ್ದಾರೆ. 

ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿನ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಯುಜಿಸಿ 2018ರಲ್ಲಿ ಅರ್ಹತಾ ಮಾನದಂಡಗಳನ್ನು  ನಿಗದಿಪಡಿಸಿತ್ತು. 

ADVERTISEMENT

ಅಭ್ಯರ್ಥಿಗಳಿಗೆ ತಮ್ಮ ಪಿಎಚ್‌.ಡಿ ಪೂರ್ಣಗೊಳಿಸಲು ಮೂರು ವರ್ಷಗಳ ಅವಕಾಶ ನೀಡಿದ್ದ ಯುಜಿಸಿ, 2021–22ರ ಶೈಕ್ಷಣಿಕ ವರ್ಷದಿಂದ ನೇಮಕಾತಿಗಾಗಿ ಹೊಸ ಮಾನದಂಡಗಳನ್ನು ಅನ್ವಯಿಸುವಂತೆ ವಿಶ್ವವಿದ್ಯಾಲಯಗಳಿಗೆ ಸೂಚಿಸಿತ್ತು.

ಬಳಿಕ ಯುಜಿಸಿಯು, ಪಿಎಚ್‌.ಡಿ ಕಡ್ಡಾಯ ಮಾನದಂಡ ಜಾರಿಗೊಳಿಸುವುದನ್ನು 2021ರ ಜುಲೈನಿಂದ 2023ರ ಜುಲೈವರೆಗೆ ವಿಸ್ತರಿಸಿತು. ಕೋವಿಡ್‌ ಕಾಲಘಟ್ಟದಲ್ಲಿ ಸಂಶೋಧನಾರ್ಥಿಗಳು ಪಿಎಚ್‌.ಡಿ ಪೂರ್ಣಗೊಳಿಸುವುದು ಕಷ್ಟವಾಗಿದ್ದ ಕಾರಣ ಯುಜಿಸಿ 2021ರಲ್ಲಿ ಈ ನಿರ್ಧಾರ ತೆಗೆದುಕೊಂಡಿತ್ತು.

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು, ‘ವಿಶ್ವವಿದ್ಯಾಲಯಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗೆ ಪಿಎಚ್‌.ಡಿ ಕಡ್ಡಾಯಗೊಳಿಸುವುದು ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಸೂಕ್ತವಲ್ಲ’ ಎಂದು 2021ರಲ್ಲಿ ಹೇಳಿಕೆ ನೀಡಿದ್ದರು.

‘ಸಹಾಯಕ ಪ್ರಾಧ್ಯಾಪಕರಾಗಲು ಪಿಎಚ್‌.ಡಿ ಅಗತ್ಯವಿಲ್ಲ ಎಂದು ನಾವು ನಂಬುತ್ತೇವೆ. ಉತ್ತಮ ಪ್ರತಿಭೆ ಇರುವವರು ಬೋಧನಾ ಕ್ಷೇತ್ರಕ್ಕೆ ಬರಲು ಈ ಷರತ್ತು ತೊಡಕಾಗಿ ಪರಿಣಮಿಸುತ್ತದೆ. ಸಹ ಪ್ರಾಧ್ಯಾಪಕರ ಮತ್ತು ಪ್ರಾಧ್ಯಾಪಕರ ಮಟ್ಟದಲ್ಲಿ ಪಿಎಚ್‌.ಡಿ ಅಗತ್ಯವಿದೆ ಎಂಬುದನ್ನು ಒಪ್ಪುತ್ತೇವೆ. ಆದರೆ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಸಹಾಯಕ ಪ್ರಾಧ್ಯಾಪಕರಿಗೆ ಇದನ್ನು ಕಡ್ಡಾಯಗೊಳಿಸುವ ಅಗತ್ಯವಿಲ್ಲ. ಅದನ್ನು ನಾವು ಸರಿಪಡಿಸುತ್ತೇವೆ’ ಎಂದು ಪ್ರತಿಕ್ರಿಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.