ಯುಜಿಸಿ
ನವದೆಹಲಿ: ರ‍್ಯಾಗಿಂಗ್ ವಿರೋಧಿ ನಿಯಮಗಳನ್ನು ಜಾರಿಗೊಳಿಸದ ದೇಶದ 18 ವೈದ್ಯಕೀಯ ಕಾಲೇಜುಗಳಿಗೆ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ.
ದೆಹಲಿ, ತಮಿಳುನಾಡು, ಅಸ್ಸಾಂ ಹಾಗೂ ಪುದುಚೇರಿಯ ತಲಾ 2 ಕಾಲೇಜುಗಳು, ಆಂಧ್ರಪ್ರದೇಶ ಮತ್ತು ಬಿಹಾರದ ತಲಾ ಮೂರು, ಮಧ್ಯಪ್ರದೇಶ, ತೆಲಂಗಾಣ, ಪಶ್ಚಿಮ ಬಂಗಾಳ ಹಾಗೂ ಉತ್ತರ ಪ್ರದೇಶದ ತಲಾ ಒಂದು ಕಾಲೇಜುಗಳಿಗೆ ನೋಟಿಸ್ ಜಾರಿಯಾಗಿದೆ.
‘ರ‍್ಯಾಗಿಂಗ್ ಪಿಡುಗು ತೊಡೆದುಹಾಕಲು ಈ ಕಾಲೇಜುಗಳು ರ‍್ಯಾಗಿಂಗ್ ವಿರೋಧಿ ನೀತಿ 2009ರ ಅನ್ವಯ ಅಗತ್ಯ ಕ್ರಮಗಳನ್ನು ಕೈಗೊಳ್ಳದಿರುವುದು ಕಂಡುಬಂದಿದೆ. ಈ ಕಾನೂನಿನನ್ವಯ ದಾಖಲಾಗುವ ವಿದ್ಯಾರ್ಥಿಗಳಿಂದ ರ‍್ಯಾಗಿಂಗ್ ವಿರೋಧಿ ಮುಚ್ಚಳಿಕೆಯನ್ನು ಬರೆಯಿಸಿಕೊಳ್ಳುವುದು ಕಡ್ಡಾಯ. ಅದನ್ನೂ ಈ ಕಾಲೇಜುಗಳು ಕೈಗೊಂಡಿಲ್ಲ’ ಎಂದು ಯುಜಿಸಿ ಕಾರ್ಯದರ್ಶಿ ಮನೀಶ್ ಜೋಶಿ ಹೇಳಿದ್ದಾರೆ.
ಈ ನಿಯಮದಡಿಯಲ್ಲಿ ಪ್ರತಿ ಶೈಕ್ಷಣಿಕ ವರ್ಷದಲ್ಲಿ ಕಾಲೇಜಿಗೆ ದಾಖಲಾಗುವ ವಿದ್ಯಾರ್ಥಿ ಹಾಗೂ ಅವರ ಪಾಲಕರು ಮುಚ್ಚಳಿಕೆಯನ್ನು ಬರೆದುಕೊಡುವುದು ಕಡ್ಡಾಯ. ಇದನ್ನು ಶಿಕ್ಷಣ ಸಂಸ್ಥೆಯೊಳಗೆ ನಡೆಯುವ ರ‍್ಯಾಗಿಂಗ್ ನಿಯಂತ್ರಿಸಲು ಬಳಸುವ ಪ್ರಯತ್ನವಾಗಿದೆ. ಆದರೆ ಈ ಕಾಲೇಜುಗಳ ನಿರ್ಲಕ್ಷ್ಯವು ಕಾನೂನು ಪಾಲನೆ ಮಾಡದಿರುವುದು ಮಾತ್ರವಲ್ಲ, ವಿದ್ಯಾರ್ಥಿಗಳ ಸುರಕ್ಷತೆಯನ್ನೂ ಅಪಾಯಕ್ಕೆ ನೂಕಿವೆ’ ಎಂದಿದ್ದಾರೆ.
ದೆಹಲಿಯ ವರ್ಧಮಾನ್ ಮಹಾವೀರ ವೈದ್ಯಕೀಯ ಕಾಲೇಜು, ಸಫ್ದರ್ಜಂಗ್ ಆಸ್ಪತ್ರೆ ಮತ್ತು ಹಮ್‌ದರ್ದ್ ವೈದ್ಯಕೀಯ ವಿಜ್ಞಾನ ಹಾಗೂ ಸಂಶೋಧನಾ ಸಂಸ್ಥೆ; ಉತ್ತರ ಪ್ರದೇಶದ ಮನೋಹರ ಲೋಹಿಯಾ ವೈದ್ಯಕೀಯ ಕಾಲೇಜು, ಪಶ್ಚಿಮ ಬಂಗಾಳದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಕಾಲೇಜು ಮತ್ತು ತೆಲಂಗಾಣದ ಒಸ್ಮಾನಿಯಾ ವೈದ್ಯಕೀಯ ಕಾಲೇಜು ಸೇರಿವೆ.
ಅಸ್ಸಾಂನ ಲಖೀಂಪುರ ವೈದ್ಯಕೀಯ ಕಾಲೇಜು ಮತ್ತ ನಾಗೋನ್ ವೈದ್ಯಕೀಯ ಕಾಲೇಜು, ಸರ್ಕಾರಿ ವೈದ್ಯಕೀಯ ಕಾಲೇಜು, ಕಟಿಹಾರ್ ಕಾಲೇಜು, ಬಿಹಾರದ ಮಧುಬನಿ ಕಾಲೇಜು, ಆಂಧ್ರ ವೈದ್ಯಕೀಯ ಕಾಲೇಜು, ಗುಂಟೂರು ಹಾಗೂ ಕರ್ನೂಲಿನ ವೈದ್ಯಕೀಯ ಕಾಲೇಜುಗಳಿಗೂ ನೋಟಿಸ್ ಜಾರಿಯಾಗಿದೆ.
ಮಧ್ಯಪ್ರದೇಶದ ಬುಂಡೇಲಖಂಡ್ ವೈದ್ಯಕೀಯ ಕಾಲೇಜು, ಪುದುಚೇರಿಯ ಜೆಐಪಿಎಂಇಆರ್ ಮತ್ತು ಮಹಾತ್ಮಾ ಗಾಂಧಿ ವೈದ್ಯಕೀಯ ಕಾಲೇಜು, ತಮಿಳುನಾಡಿನ ಸವಿತಾ ಕಾಲೇಜು ಹಾಗೂ ಕ್ರಿಶ್ಚಿಯನ್ ವೈದ್ಯಕೀಯ ಕಾಲೇಜುಗಳು ಸೇರಿವೆ.
ಈ ಕಾಲೇಜುಗಳು ಏಳು ದಿನಗಳ ಒಳಗಾಗಿ ಲಿಖಿತ ಉತ್ತರ ಸಲ್ಲಿಸುವಂತೆ ನೋಟಿಸ್‌ನಲ್ಲಿ ಹೇಳಲಾಗಿದೆ. ಒಂದೊಮ್ಮೆ ಸೂಚಿಸಿದ ಸಮಯದಲ್ಲಿ ಉತ್ತರ ನೀಡಲು ವಿಫಲವಾದಲ್ಲಿ ರ‍್ಯಾಗಿಂಗ್ ವಿರೋಧಿ ಕಾಯ್ದೆಯಡಿಯಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದೆನ್ನಲಾಗಿದೆ ಎಂದ ಜೋಶಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.