ADVERTISEMENT

ಆಧಾರ್‌: ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿದ ‘ಸುಪ್ರೀಂ’

ಪಿಟಿಐ
Published 5 ಜುಲೈ 2019, 16:27 IST
Last Updated 5 ಜುಲೈ 2019, 16:27 IST
   

ನವದೆಹಲಿ: ಆಧಾರ್‌ ಕಾರ್ಡ್‌ ಅಧಿಸೂಚನೆಯ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿ ವಿಚಾರಣೆಯ ಸಂದರ್ಭ ಸುಪ್ರೀಂಕೋರ್ಟ್‌ ಕೇಂದ್ರ ಸರ್ಕಾರ ಮತ್ತು ವಿಶಿಷ್ಟ ಗುರುತುಚೀಟಿ ಪ್ರಾಧಿಕಾರದ ಪ್ರತಿಕ್ರಿಯೆಯನ್ನು ಕೋರಿದೆ.

ಎಸ್‌.ಎ. ಬಾಬ್ಡೆ ಮತ್ತು ಬಿ.ಆರ್‌.ಗವಾಯಿ ಅವರನ್ನೊಳಗೊಂಡ ಪೀಠವು ಆಧಾರ್‌ ಸಿಂಧುತ್ವ ಮತ್ತು ಇತರ ಕಾನೂನು (ತಿದ್ದುಪಡಿ) ಅಧಿಸೂಚನೆ 2019 ಮತ್ತು ಆಧಾರ್‌ ನಿಯಂತ್ರಣಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ಮತ್ತು ಪ್ರಾಧಿಕಾರದ ಪ್ರತಿಕ್ರಿಯೆ ಕೇಳಿದೆ.

2019ರ ಗಜೆಟ್‌ನಲ್ಲಿ ಈ ಅಧಿಸೂಚನೆಯನ್ನು ಪ್ರಕಟಿಸಲಾಗಿತ್ತು. ನಿವೃತ್ತ ಸೇನಾ ಅಧಿಕಾರಿ ಎಸ್‌.ಜಿ. ಒಂಬತ್‌ಕೆರೆ ಮತ್ತು ಮಾನವಹಕ್ಕುಗಳ ಕಾರ್ಯಕರ್ತ ಬೇಜ್ವಾಡಾ ವಿಲ್ಸನ್‌ ಅವರು ಸಲ್ಲಿಸಿದ ಅರ್ಜಿಯಲ್ಲಿ ಅಧಿಸೂಚನೆ ಮತ್ತು ನಿಯಂತ್ರಣ ನಿಯಮಗಳು ಸಂವಿಧಾನವು ನಾಗರಿಕರಿಗೆ ನೀಡಿದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಆರೋಪಿಸಿದ್ದರು.

ADVERTISEMENT

ಈ ಅಧಿಸೂಚನೆಯು ಆಧಾರ್‌ ವ್ಯವಸ್ಥೆಯನ್ನು ಖಾಸಗಿಯವರು ಹಿಂಬಾಗಿಲಿನಿಂದ ಪಡೆಯುವ ಅವಕಾಶ ಕಲ್ಪಿಸುತ್ತಿದೆ ಎಂದು ಆರೋಪಿಸಲಾಗಿದೆ. ವಕೀಲರಾದ ವಿಪಿನ್‌ ನಾಯರ್‌ ಈ ಅರ್ಜಿಯ ಪರ ವಾದಿಸುತ್ತಿದ್ದಾರೆ.

ಆಧಾರ್‌ ಡೇಟಾಬೇಸ್‌ಗೆ ಅವಕಾಶ ಪಡೆದಿರುವ ಖಾಸಗಿ ಸಂಸ್ಥೆಯು ಸಾರ್ವಜನಿಕ ಕೆಲಸವನ್ನು ನಿರ್ವಹಿಸುತ್ತಿದ್ದು, ಲಭ್ಯ ಮಾಹಿತಿಯನ್ನು ಸಂಗ್ರಹಿಸಿ ಇಡದಂತೆ ಆದೇಶ ನೀಡಬೇಕು ಎಂದು ಅರ್ಜಿಯಲ್ಲಿ ಆಗ್ರಹಿಸಲಾಗಿದೆ.

ಅಲ್ಲದೆ 2019ರ ನಿಯಂತ್ರಣ ನಿಯಮಗಳು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದ್ದು, ಅವು ಸಂವಿಧಾನ ಬಾಹಿರ ಎಂದು ಘೋಷಿಸುವಂತೆ ಅರ್ಜಿದಾರರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.