ADVERTISEMENT

ಮ್ಯಾನ್ಮಾರ್‌ನಲ್ಲಿ ಸೇನಾ ದಂಗೆ: ಕ್ರಮಕ್ಕಾಗಿ ಏಷ್ಯಾ ನಾಯಕರಿಗೆ ವಿಶ್ವಸಂಸ್ಥೆ ಕರೆ

ಪಿಟಿಐ
Published 9 ಫೆಬ್ರುವರಿ 2021, 5:56 IST
Last Updated 9 ಫೆಬ್ರುವರಿ 2021, 5:56 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಿಶ್ವಸಂಸ್ಥೆ: ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ತೀವ್ರ ಕಳವಳವಳ ವ್ಯಕ್ತಪಡಿಸಿರುವ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್‌, ಸೇನಾ ದಂಗೆಯನ್ನು ಹಿಮ್ಮೆಟ್ಟಿಸಲು ಸಾಮೂಹಿಕ ಹಾಗೂ ದ್ವಿಪಕ್ಷೀಯ ಕ್ರಮ ಕೈಗೊಳ್ಳಬೇಕೆಂದು ಏಷ್ಯಾ ವಲಯದ ನಾಯಕರಿಗೆ ಕರೆ ನೀಡಿದ್ದಾರೆ.

‘ಪ್ರಧಾನ ಕಾರ್ಯದರ್ಶಿಯವರು, ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ಎಲ್ಲ ವಿದ್ಯಮಾನಗಳನ್ನು ತುಂಬಾ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಸೇನಾ ದಂಗೆಯನ್ನು ಹಿಮ್ಮೆಟ್ಟಿಸಲು ಸಾಮೂಹಿಕ ಮತ್ತು ದ್ವಿಪಕ್ಷೀಯ ಕ್ರಮ ಕೈಗೊಳ್ಳಲು ವಿಶ್ವಸಂಸ್ಥೆಯಲ್ಲಿನ ಪ್ರಾದೇಶಿಕ ವಿಶೇಷ ರಾಯಭಾರಿ ಮತ್ತು ಪ್ರಮುಖ ಅಂತರರಾಷ್ಟ್ರೀಯ ಮಟ್ಟದ ನಾಯಕರನ್ನು ಕೇಳಿದ್ದಾರೆ‘ ಎಂದು ಪ್ರಧಾನ ಕಾರ್ಯದರ್ಶಿಯವರ ವಕ್ತಾರ ಸ್ಟೀಫನ್ ಡುಜಾರಿಕ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

‘ಮಾನವ ಹಕ್ಕುಗಳ ಮಂಡಳಿಯ ವಿಶೇಷ ಅಧಿವೇಶನ ಶೀಘ್ರದಲ್ಲೇ ನಡೆಯುವ ಕುರಿತು ಚರ್ಚೆಗಳಾಗುತ್ತಿರುವುದನ್ನು ವಿಶ್ವಸಂಸ್ಥೆ ಸ್ವಾಗತಿಸುತ್ತದೆ. ಇದು ಭದ್ರತಾ ಮಂಡಳಿಯಲ್ಲಿ ಮ್ಯಾನ್ಮಾರ್ ಪರಿಸ್ಥಿತಿಯ ಕುರಿತ ಚರ್ಚೆಗಳನ್ನು ತಿಳಿದುಕೊಳ್ಳಲು ಸಹಾಯವಾಗುತ್ತದೆ‘ ಎಂದು ಡುಜಾರಿಕ್ ಹೇಳಿದರು.

ADVERTISEMENT

‘ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮತ್ತು ಅವರ ವಿಶೇಷ ಮ್ಯಾನ್ಮಾರ್‌ನ ರಾಯಭಾರಿ ಕ್ರಿಸ್ಟೀನ್ ಶ್ರೆನರ್ ಬರ್ಗೆನರ್ ಅವರು ಮ್ಯಾನ್ಮಾರ್‌ನಲ್ಲಿ ಪ್ರಜಾಪ್ರಭುತ್ವ ಆಡಳಿತವನ್ನು ಮರು ಸ್ಥಾಪಿಸಲು ಭದ್ರತಾ ಮಂಡಳಿ ಸೇರಿದಂತೆ, ಅಂತರರಾಷ್ಟ್ರೀಯ ಸಮುದಾಯದ ನಾಯಕರನ್ನು ಅಣಿಗೊಳಿಸುತ್ತಿದ್ದಾರೆ‘ ಎಂದು ಡುಜಾರಿಕ್ ತಿಳಿಸಿದ್ದಾರೆ.

ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಮೇಲೆ ಮ್ಯಾನ್ಮಾರ್‌ನಲ್ಲಿ ಕಳೆದ ವಾರ ಸೇನಾ ಆಡಳಿತ, ಜನರಿಂದ ಆಯ್ಕೆಯಾದ ಸರ್ಕಾರವನ್ನು ಉರುಳಿಸಿ, ದೇಶದಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಿದೆ. ಆಡಳಿತಾರೂಢ ಸರ್ಕಾರದ ನಾಯಕಿ ಆಂಗ್ ಸಾನ್ ಸೂಕಿ ಸೇರಿದಂತೆ ಉನ್ನತ ರಾಜಕೀಯ ವ್ಯಕ್ತಿಗಳನ್ನು ಬಂಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.