
ವಿಶ್ವಸಂಸ್ಥೆ: ‘ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಪಾಕಿಸ್ತಾನದ ರಾಯಭಾರಿಯು ಜಮ್ಮು ಮತ್ತು ಕಾಶ್ಮೀರದ ವಿಚಾರವನ್ನು ಪ್ರಸ್ತಾಪಿಸುವ ಮೂಲಕ ತನ್ನ ದೇಶದ ವಿಭಜಕ ಕಾರ್ಯಸೂಚಿಯನ್ನು ಪ್ರೋತ್ಸಾಹಿಸುತ್ತಿದ್ದಾರೆ’ ಎಂದು ಭಾರತ ಆರೋಪಿಸಿದೆ.
‘ಬಹುತ್ವ ಹಾಗೂ ಪ್ರಜಾಪ್ರಭುತ್ವ ಹೊಂದಿದ ರಾಷ್ಟ್ರಗಳಲ್ಲಿ ಪ್ರತ್ಯೇಕತೆಯನ್ನು ಪ್ರೋತ್ಸಾಹಿಸಲು ಸ್ವನಿರ್ಣಯ ಹಕ್ಕಿನ ದುರುಪಯೋಗ ಮಾಡಿಕೊಳ್ಳಬಾರದು’ ಎಂದು ವಿಶ್ವಸಂಸ್ಥೆಯಲ್ಲಿ ಭಾರತ ರಾಯಭಾರ ಕಚೇರಿಯ ಪ್ರತಿನಿಧಿ ಎಲ್ಡೊಸ್ ಮ್ಯಾಥ್ಯೂ ಪುನ್ನೊಸ್ ತಿಳಿಸಿದ್ದಾರೆ.
‘ಸದಸ್ಯ ರಾಷ್ಟ್ರಗಳು ಸಂಕುಚಿತ ಮನೋಭಾವವನ್ನು ಮೀರಿ ಬೆಳೆಯಬೇಕಾದ ಸಂದರ್ಭದಲ್ಲಿ ಪಾಕಿಸ್ತಾನವು ವಿಶ್ವಸಂಸ್ಥೆಯ ಎಲ್ಲಾ ವೇದಿಕೆಯನ್ನು ದುರುಪಯೋಗಪಡಿಸಿಕೊಂಡು, ವಿಭಜಕ ಕಾರ್ಯಸೂಚಿಗೆ ಪ್ರೋತ್ಸಾಹ ನೀಡುತ್ತಿದೆ’ ಎಂದು ಪುನ್ನೊಸ್ ಆರೋಪಿಸಿದ್ದಾರೆ.
‘ಪಾಕಿಸ್ತಾನದ ನಡವಳಿಕೆಗೆ ಈ ವೇದಿಕೆಯೂ ಹೊರತಾಗಿಲ್ಲ. ಭಾರತದ ಅವಿಭಾಜ್ಯ ಅಂಗವಾದ ಹಾಗೂ ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದ ವಿಚಾರವನ್ನು ಅನಗತ್ಯವಾಗಿ ಪ್ರಸ್ತಾಪಿಸುತ್ತಿದೆ’ ಎಂದು ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.