ADVERTISEMENT

ಪ್ರಧಾನಿ ಭೇಟಿಯಾಗಿ ಮರಳಿದ ಸಂಸದರು: ರಾಜ್ಯದ ಮೂವರು ಸಂಪುಟಕ್ಕೆ

ಸಿದ್ದಯ್ಯ ಹಿರೇಮಠ
Published 7 ಜುಲೈ 2021, 8:42 IST
Last Updated 7 ಜುಲೈ 2021, 8:42 IST
ಕೇಂದ್ರ ಸಚಿವ ಸಂಪುಟ ಸೇರಿಕೊಳ್ಳಲಿರುವ ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿ ಅವರು ಕುಟುಂಬ ಸದಸ್ಯರೊಂದಿಗೆ ದೆಹಲಿ ನಿವಾಸದಲ್ಲಿ ಬುಧವಾರ ಸಂಭ್ರಮದಲ್ಲಿ ಇರುವುದು. ಪತ್ನಿ ವಿಜಯಕುಮಾರಿ, ಪುತ್ರಿಯರು, ಕುಟುಂಬ ಸದಸ್ಯರು ಚಿತ್ರದಲ್ಲಿದ್ದಾರೆ.
ಕೇಂದ್ರ ಸಚಿವ ಸಂಪುಟ ಸೇರಿಕೊಳ್ಳಲಿರುವ ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿ ಅವರು ಕುಟುಂಬ ಸದಸ್ಯರೊಂದಿಗೆ ದೆಹಲಿ ನಿವಾಸದಲ್ಲಿ ಬುಧವಾರ ಸಂಭ್ರಮದಲ್ಲಿ ಇರುವುದು. ಪತ್ನಿ ವಿಜಯಕುಮಾರಿ, ಪುತ್ರಿಯರು, ಕುಟುಂಬ ಸದಸ್ಯರು ಚಿತ್ರದಲ್ಲಿದ್ದಾರೆ.   

ನವದೆಹಲಿ: ಕೇಂದ್ರ ಸಂಪುಟದಲ್ಲಿ ಸೇರ್ಪಡೆ ಆಗಲಿರುವ ಸಂಸದರೊಂದಿಗೆ‌ ಬುಧವಾರ ಮಧ್ಯಾಹ್ನ ಪ್ರಧಾನಿ ಮೋದಿ ವೈಯಕ್ತಿಕವಾಗಿ ಮಾತುಕತೆ ‌ನಡೆಸಿದ್ದಾರೆ.

ಸಂಸದರಾದ ರಾಜೀವ್‌ ಚಂದ್ರಶೇಖರ್‌, ಶೋಭಾ ಕರಂದ್ಲಾಜೆ, ಎ.ನಾರಾಯಣಸ್ವಾಮಿ ಅವರು ಇಂದು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದು, ಕರ್ನಾಟಕದಿಂದ ಈ ಮೂವರನ್ನುಕೇಂದ್ರ ಸಂಪುಟಕ್ಕೆ ತೆಗೆದುಕೊಳ್ಳಲಾಗುತ್ತದೆ ಎನ್ನಲಾಗಿದೆ.

ರಾಜ್ಯದ ಬಿಜೆಪಿ‌ ಸಂಸದರಾದ ಶೋಭಾ ಕರಂದ್ಲಾಜೆ ಹಾಗೂ ಎ.ನಾರಾಯಣಸ್ವಾಮಿ ಸಭೆಯಲ್ಲಿ ಭಾಗವಹಿಸಿ ತೆರಳಿದ್ದು, ಅವರಿಗೆ ಸಚಿವ ಸ್ಥಾನ ದೊರೆಯುವುದು ಖಾತರಿ ಆದಂತಾಗಿದೆ.

ADVERTISEMENT

'ಪಕ್ಷದ ಸಾಮಾನ್ಯ ಕಾರ್ತಕರ್ತನಾದ ನನ್ನನ್ನು ಗುರುತಿಸಿ ಜವಾಬ್ದಾರಿ ನೀಡಲಾಗುತ್ತಿದ್ದು, ಪ್ರಧಾನಿ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವೆ' ಎಂದು ಚಿತ್ರದುರ್ಗದ ಸಂಸದ ಎ.ನಾರಾಯಣಸ್ವಾಮಿ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.

ಪ್ರಧಾನಿ ಕಚೇರಿ ಕರೆಯ ಮೇರೆಗೆ ಮಂಗಳವಾರವೇ ದೆಹಲಿಗೆ ಬಂದಿರುವ ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಸಂಪುಟ ದರ್ಜೆ ಸಚಿವ ಸ್ಥಾನ ದೊರೆಯಬಹುದು ಎಂದು ಹೇಳಲಾಗುತ್ತಿದೆ.

ಸದಾನಂದಗೌಡ ಸಂಪುಟದಿಂದ ಹೊರಕ್ಕೆ?

ರಾಸಾಯನಿಕ ಮತ್ತು ರಸಗೊಬ್ವರ ಖಾತೆ ಸಚಿವ ಡಿ.ವಿ. ಸದಾನಂದಗೌಡ ಅವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವ ರಮೇಶ ನಿಶಾಂಕ‌ ಪೋಖ್ರಿಯಾಲ್, ಕಾರ್ಮಿಕ ಖಾತೆ‌ ಸಚಿವ ಸಂತೋಷ ಕುಮಾರ್ ಗಂಗ್ವಾರ್ ಸೇರಿದಂತೆ ಒಟ್ಟು ಎಂಟು ಜನ‌ ಸಚಿವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಈ ಎಲ್ಲ ಸಚಿವರು ಯಾವುದೇ ಸಂದರ್ಭ ರಾಜೀನಾಮೆ ಸಲ್ಲಿಸಬಹುದು ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಒಟ್ಟು 25ರಿಂದ 30 ಸಂಸದರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.