ADVERTISEMENT

INDIA ಮೈತ್ರಿಕೂಟದ ಹೆಸರಿಗೆ ಬೆಚ್ಚಿ ಬಿದ್ದ ಕೇಂದ್ರ ಸರ್ಕಾರ: ಸಿದ್ದರಾಮಯ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಸೆಪ್ಟೆಂಬರ್ 2023, 14:14 IST
Last Updated 10 ಸೆಪ್ಟೆಂಬರ್ 2023, 14:14 IST
ಸಿದ್ದರಾಮಯ್ಯ ಮತ್ತು ನರೇಂದ್ರ ಮೋದಿ
ಸಿದ್ದರಾಮಯ್ಯ ಮತ್ತು ನರೇಂದ್ರ ಮೋದಿ   

ಬೆಂಗಳೂರು: ‘ತನ್ನ ಕಾರ್ಯಕ್ರಮಗಳಿಗೆ ‘ಮೇಕ್ ಇನ್ ಇಂಡಿಯಾ’, ‘ಸ್ಕಿಲ್ ಇಂಡಿಯಾ’, ‘ಸ್ಟ್ಯಾಂಡ್ ಅಪ್ ಇಂಡಿಯಾ’ ಎಂದೆಲ್ಲ ಹೆಸರಿಟ್ಟಿದ್ದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವೇ ಈಗ ‘ಇಂಡಿಯಾ’ (ವಿರೋಧ ಪಕ್ಷಗಳ ಮಹಾ ಮೈತ್ರಿಯ ಹೆಸರು) ಹೆಸರಿಗೆ ಬೆಚ್ಚಿ ಬಿದ್ದು ದೇಶದ ಹೆಸರನ್ನೇ ‘ಭಾರತ’ ಎಂದು ಬದಲಿಸಲು ಹೊರಟಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕಾಂಗ್ರೆಸ್ ಕಾರ್ಯಕಾರಣಿ ಸಮಿತಿ (ಸಿಡಬ್ಲ್ಯುಸಿ) ಸದಸ್ಯರಾಗಿ ಆಯ್ಕೆಯಾದ ರಾಜ್ಯಸಭೆ ಸದಸ್ಯ ಸಯ್ಯದ್‌ ನಾಸಿರ್ ಹುಸೇನ್ ಅವರಿಗೆ ಅರಮನೆ ಮೈದಾನದಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತ ಘಟಕ ಭಾನುವಾರ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಾವು (ಕಾಂಗ್ರೆಸ್‌) ‘ಭಾರತ್ ಜೋಡೊ ನಡೆಸಿದವರು’. ನಮಗೆ ಭಾರತ- ಇಂಡಿಯಾ ಬಗ್ಗೆ ಪಾಠ ಹೇಳುವ ಮೂರ್ಖತನಕ್ಕೆ ಬಿಜೆಪಿ ಪರಿವಾರ ಮುಂದಾಗಿದೆ. ಅವರಿಗೆ (ಬಿಜೆಪಿ) ಭಾರತದ ಬಗ್ಗೆಯೂ ಗೌರವ ಇಲ್ಲ. ಇಂಡಿಯಾದ ಘನತೆಯೂ ಗೊತ್ತಿಲ್ಲ’ ಎಂದು ಟೀಕಿಸಿದರು.

ADVERTISEMENT

‘ಬಹುತ್ವ ಭಾರತೀಯ ಸಂಸ್ಕೃತಿಯ ಜೀವಾಳ. ಬಹುತ್ವದ ನಾಶ ಎಂದರೆ ಅದು ನಮ್ಮ ಸಂವಿಧಾನದ ನಾಶ. ಸಾವಿರಾರು ವರ್ಷಗಳ ಭಾರತದ ಬಹುತ್ವ ಸಂಸ್ಕೃತಿಯನ್ನು ನಾಶಪಡಿಸುವ ಹುನ್ನಾರ ನಡೆಯುತ್ತಿದೆ. ಇದಕ್ಕಾಗಿ ಆಕರ್ಷಕ ಪದಗಳನ್ನು, ಘೋಷಣೆಗಳನ್ನು ಕೊಡುತ್ತಿದ್ದಾರೆ. ಆದರೆ, ಎಷ್ಟೇ ಹುನ್ನಾರ, ಪಿತೂರಿ ರಾಜಕಾರಣ ನಡೆಸಿದರೂ ನಾವು ಬಹುತ್ವದ ಭಾರತವನ್ನು, ಈ ಮಣ್ಣಿನ ಸೌಹಾರ್ದ ಪರಂಪರೆಯನ್ನು, ಜಾತ್ಯತೀತ ಸಂಸ್ಕೃತಿಯನ್ನು, ಸಂವಿಧಾನವನ್ನು ಕಾಪಾಡಿಕೊಳ್ಳುತ್ತೇವೆ’ ಎಂದರು.

ಕೇಂದ್ರದ ಮಾಜಿ ಸಚಿವ ಸಲ್ಮಾನ್ ಖುರ್ಷಿದ್, ಬಿಹಾರ ವಿಧಾನಸಭೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಶಕೀಲ್ ಅಹಮದ್, ಮಹಾರಾಷ್ಟ್ರ ಕಾಂಗ್ರೆಸ್ ಮುಖಂಡರಾದ ಬಾಬಾ ಸಿದ್ದಿಕಿ, ಸಚಿವರಾದ ಪ್ರಿಯಾಂಕ್ ಖರ್ಗೆ, ಬೈರತಿ ಸುರೇಶ್, ರಹೀಂ ಖಾನ್, ರಾಜ್ಯಸಭೆ ಸದಸ್ಯ ಜಿ.ಸಿ. ಚಂದ್ರಶೇಖರ್, ಮುಖ್ಯಮಂತ್ರಿಯ ರಾಜಕೀಯ ಸಲಹೆಗಾರ‌ ನಸೀರ್ ಅಹಮದ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ಶಾಸಕ ‌ತನ್ವೀರ್ ಸೇಠ್ ಇದ್ದರು.

ಭಯದ ವಾತಾವರಣ ದೂರ: ಡಿಕೆಶಿ
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ‘ಕರ್ನಾಟಕದಲ್ಲಿ ಮೇ 13ಕ್ಕೂ ಮೊದಲು ಎಲ್ಲ ಧರ್ಮಿಯರೂ ಭಯದ ವಾತಾವರಣದಲ್ಲಿ ಬದುಕುತ್ತಿದ್ದರು. ಈಗ ನಿರ್ಭಯವಾಗಿ ಬದುಕುತ್ತಿದ್ದಾರೆ’ ಎಂದು ಅಭಿಪ್ರಾಯಪಟ್ಟರು. ‘ಬಿಜೆಪಿ ಸರ್ಕಾರ ಅಮಾಯಕ ಅಲ್ಪಸಂಖ್ಯಾತರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಿತ್ತು. ನಾವು ಕಾನೂನು ತಜ್ಞರ ಬಳಿ ಸುಳ್ಳು ಕೇಸುಗಳ ಕುರಿತು ಚರ್ಚೆ ನಡೆಸುತ್ತೇವೆ’ ಎಂದ ಅವರು, ‘ಅಲ್ಪಸಂಖ್ಯಾತರು ನಿರಾಳವಾಗಿ ಉಸಿರಾಡಬಹುದು. ಅನ್ಯಾಯ ಮಾಡಲು ನಮ್ಮ ಸರ್ಕಾರ ಬಿಡುವುದಿಲ್ಲ. ಯಾವುದೇ ರೀತಿಯ ತೊಂದರೆಯಾದರೂ ನಾವು ಬೆನ್ನಿಗೆ ನಿಲ್ಲುತ್ತೇವೆ. ಕಾನೂನಿನ ಚೌಕಟ್ಟು ಮೀರಿ ಎಂದಿಗೂ ನಡೆಯುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.