ಪಟ್ನಾ : ಅಲ್ಪಸಂಖ್ಯಾತರನ್ನು ಉದ್ದೇಶಿಸಿ, ‘ನಮಕ್ ಹರಾಮಿಗಳ ಮತಗಳು ನನಗೆ ಅಗತ್ಯವಿಲ್ಲ’ ಎಂದು ಹೇಳಿಕೆ ನೀಡಿರುವ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಮತ್ತೊಮ್ಮೆ ವಿವಾದಕ್ಕೀಡಾಗಿದ್ದಾರೆ.
ಬಿಹಾರದ ಅರ್ವಾಲ್ ಜಿಲ್ಲೆಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಶನಿವಾರ ಮಾತನಾಡಿದ ವೇಳೆ ಅವರು ಈ ಹೇಳಿಕೆ ನೀಡಿದ್ದಾರೆ.
‘ನೀವು ನನಗೆ ಮತ ಹಾಕಿದ್ದೀರಾ? ಎಂದು ಒಮ್ಮೆ ನಾನು ಮೌಲ್ವಿಯೊಬ್ಬರಿಗೆ ಕೇಳಿದೆ. ಅದಕ್ಕೆ ‘ಹೌದು’ ಅಂದರು. ದೇವರ ಮೇಲೆ ಪ್ರಮಾಣ ಮಾಡಿ ಹೇಳಿ ಎಂದಾಗ, ‘ಇಲ್ಲ, ಮತ ಹಾಕಿಲ್ಲ’ ಎಂದು ಉತ್ತರಿಸಿದರು’ ಎಂದರು.
‘ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ಹೊಂದಿದ್ದೀರಾ ಎಂದೂ ಅವರನ್ನು ಕೇಳಿದೆ. ಅದಕ್ಕೆ ಅವರು ಸಕಾರಾತ್ಮಕವಾಗಿ ಉತ್ತರಿಸಿದರು. ಕಾರ್ಡ್ ಅನ್ನು ಹಿಂದೂ– ಮುಸ್ಲಿಂ ಆಧಾರದ ಮೇಲೆ ವಿತರಿಸಲಾಗಿದೆಯೇ? ಎಂದು ಕೇಳಿದೆ. ಅದಕ್ಕೆ ಅವರು ನಕಾರಾತ್ಮಕವಾಗಿ ಉತ್ತರಿಸಿದರು. ನಿಮ್ಮಂತ ‘ನಮಕ್ ಹರಾಮ್’ಗಳ ಮತಗಳನ್ನು ನಾವು ಬಯಸುವುದಿಲ್ಲ ಎಂದು ನಾನು ಅವರಿಗೆ ಹೇಳಿದೆ. ಮುಸ್ಲಿಮರು ಕೇಂದ್ರದ ಎಲ್ಲಾ ಯೋಜನೆಗಳನ್ನೂ ಪಡೆದುಕೊಳ್ಳುತ್ತಾರೆ. ಆದರೆ ಬಿಜೆಪಿಗೆ ಮತ ಹಾಕುವುದಿಲ್ಲ. ಅಂತವರನ್ನು ‘ನಮಕ್ ಹರಾಮ್’ ಎಂದು ಕರೆಯಲಾಗುತ್ತದೆ’ ಎಂದು ಹೇಳಿದರು.
‘ಬಿಹಾರದ ಅಭಿವೃದ್ಧಿಗಾಗಿ ಎನ್‌ಡಿಎ ಸರ್ಕಾರವು ಸಾಕಷ್ಟು ಕಾರ್ಯಗಳನ್ನು ಮಾಡಿದೆ. ಬಿಹಾರ ಈಗ ಬದಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.