ADVERTISEMENT

ಅಮೃತಾನಂದಮಯಿ ಸಾಧನೆ ಅನನ್ಯ: ಕೇಂದ್ರ ಸಚಿವ ನಡ್ಡಾ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 16:17 IST
Last Updated 29 ಸೆಪ್ಟೆಂಬರ್ 2025, 16:17 IST
ಅಪಸ್ಮಾರ ಪೀಡಿತ 1,300 ಬಡರೋಗಿಗಳ ಉಚಿತ ಶಸ್ತ್ರಚಿಕಿತ್ಸೆಗಾಗಿ ಇಸ್ರೊ ಮತ್ತು ಅಮೃತ ಆಸ್ಪತ್ರೆಗಳ ಸಹಕಾರದಲ್ಲಿ ರೂಪಿಸಲಾಗಿರುವ ಯೋಜನೆಗೆ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಸಾಂಕೇತಿಕವಾಗಿ ಚಾಲನೆ ನೀಡಿದರು. 
ಅಪಸ್ಮಾರ ಪೀಡಿತ 1,300 ಬಡರೋಗಿಗಳ ಉಚಿತ ಶಸ್ತ್ರಚಿಕಿತ್ಸೆಗಾಗಿ ಇಸ್ರೊ ಮತ್ತು ಅಮೃತ ಆಸ್ಪತ್ರೆಗಳ ಸಹಕಾರದಲ್ಲಿ ರೂಪಿಸಲಾಗಿರುವ ಯೋಜನೆಗೆ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಸಾಂಕೇತಿಕವಾಗಿ ಚಾಲನೆ ನೀಡಿದರು.    

ಅಮೃತಪುರಿ (ಕೇರಳ): ‘ಮಾತಾ ಅಮೃತಾನಂದಮಯಿ ಅವರು ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಕರುಣಾಪೂರಿತ ಸೇವೆ ಸಮಾಜದ ವಂಚಿತ ಸಮುದಾಯದ ಪಾಲಿಗೆ ಭರವಸೆಯ ದಾರಿದೀಪ’ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಬಣ್ಣಿಸಿದರು.

ಕೇರಳದ ಕೊಲ್ಲಂ ಜಿಲ್ಲೆಯ ಮಾತಾ ಅಮೃತಾನಂದಮಯಿ ಅಂತರರಾಷ್ಟ್ರೀಯ ಕೇಂದ್ರ, ಅಮೃತಪುರಿಯಲ್ಲಿ ಆಯೋಜನೆಗೊಂಡಿದ್ದ ಮಾತಾ ಅಮೃತಾನಂದಮಯಿ ಅವರ 72ನೇ ಜನ್ಮದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಅಮ್ಮನ ಸಂಪೂರ್ಣ ಜೀವನ ಮಾನವತೆಯ ಸೇವೆಗೆ ಮೀಸಲಾಗಿದೆ. ಬಡ ವರ್ಗದವರಿಗಾಗಿ ಶಿಕ್ಷಣ ಕ್ಷೇತ್ರದಲ್ಲಿ ಅವರು ಇರಿಸಿರುವ ಹೆಜ್ಜೆಗಳು ಮತ್ತು ಮಹಿಳಾ ಸಬಲೀಕರಣಕ್ಕಾಗಿ ಹಮ್ಮಿಕೊಂಡಿರುವ ಅಸಂಖ್ಯ ಕಾರ್ಯಕ್ರಮಗಳು ಇಂದು ವಿಶ್ವದಾದ್ಯಂತ ಸದ್ದಿಲ್ಲದ ಕ್ರಾಂತಿಯನ್ನೇ ಮಾಡಿವೆ. ಅಮೃತ ಆಸ್ಪತ್ರೆಗಳ ಆರೋಗ್ಯ ಸೇವೆ, ಅಗಣಿತ ಸಂಶೋಧನೆ ಗಮನಾರ್ಹವಾಗಿವೆ’ ಎಂದು ಶ್ಲಾಘಿಸಿದರು.

ADVERTISEMENT

ತಿರುವನಂತಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಸಂಸದ ಶಶಿ ತರೂರ್‌, ‘ಮಾತಾ ಅಮೃತಾನಂದಮಯಿ ಭಾರತದ ಸನಾತನ ಆತ್ಮವಿದ್ದಂತೆ. ಅಮ್ಮನ ವಾತ್ಸಲ್ಯಪೂರಿತ ಅಪ್ಪುಗೆ, ದಯಾಳು ಗುಣ ಮತ್ತು ಲೋಕಸೇವೆ ಅನನ್ಯವಾದುದು. ಸಕಲ ಜೀವರಾಶಿಗಳ ಮೇಲಿನ ಬೇಷರತ್ತಾದ ಅವರ ನಿಷ್ಕಲ್ಮಷ ಪ್ರೀತಿ ಇವತ್ತು ವಿಶ್ವಮನ್ನಣೆ ಪಡೆದಿದೆ’ ಎಂದರು.

‘ಮಾನವ ಕಲ್ಯಾಣಕ್ಕಾಗಿ ಅಹರ್ನಿಶಿ ದುಡಿಯುತ್ತಿರುವ ಅಮ್ಮ ಪ್ರತಿಯೊಬ್ಬರ ಹೃದಯದೊಳಗಿನ ನಿಜ ಬೆಳಕನ್ನು ಉದ್ದೀಪಿಸುವ ಮೂಲಕ ಮಧುರ ಪ್ರೇಮಧಾರೆಯ ಸಿಂಚನಗೈಯ್ಯುತ್ತಿದ್ದಾರೆ. ಎಲ್ಲ ಕ್ಷೇತ್ರಗಳಲ್ಲಿ ಅವರು ನಿಮ್ನ ವರ್ಗಕ್ಕೆ ನೀಡುತ್ತಿರುವ ಸಹಾಯ ಹಸ್ತ ಮತ್ತು ನಿರ್ಗತಿಕರ ದೈಹಿಕ ಆರೋಗ್ಯಕ್ಕೆ ಅವರು ನೀಡಿರುವ ಒತ್ತು ಮನುಷ್ಯ ಪ್ರೇಮಕ್ಕೆ ಕೈಗನ್ನಡಿ’ ಎಂದರು.

ಇದೇ ವೇಳೆ, ಮಲಯಾಳ ಭಾಷೆಯ ಖ್ಯಾತ ಸಾಹಿತಿ ಪಿ.ಆರ್‌.ನಾಥನ್‌ ಅವರಿಗೆ ವರ್ಷದ ‘ಅಮೃತ ಕೀರ್ತಿ’ ಪುರಸ್ಕಾರ ನೀಡಿ ಗೌರವಿಸಲಾಯಿತು. ಜೆ.ಪಿ.ನಡ್ಡಾ ಅವರು ನಾಥನ್‌ ಅವರಿಗೆ ₹1.23 ಲಕ್ಷ ಮೊತ್ತದ ನಗದು ಬಹುಮಾನ ವಿತರಿಸಿದರು.

ಸಮಾರಂಭದಲ್ಲಿ ಕೇರಳ ರಾಜ್ಯಪಾಲ ರಾಜೇಂದ್ರ ವಿ.ಅರಳೇಕರ್‌, ಕೇಂದ್ರ ಗೃಹ ಸಚಿವಾಲಯದ ರಾಜ್ಯ ಸಚಿವ ಜಾರ್ಜ್‌ ಕುರಿಯನ್‌ ಹಾಗೂ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ರಾಜ್ಯ ಸಚಿವ ಎಲ್.ಮುರುಗನ್‌, ಹರಿಯಾಣದ ಆಹಾರ ಮತ್ತು ವಸತಿ ಸಚಿವ ರಾಜೇಶ್ ನಗರ್‌, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಕೇರಳ ಹೈಕೋರ್ಟ್ ನ್ಯಾಯಮೂರ್ತಿಗಳಾದ ಎನ್‌.ನಗರೇಶ್‌ ಮತ್ತು ಕೆ.ವಿ.ಜಯಕುಮಾರ್‌, ಸ್ಥಮಿಝೋರಾಂನ ಮಾಜಿ ರಾಜ್ಯಪಾಲ ಕುಮ್ಮನಂ ರಾಜಶೇಖರನ್, ಳೀಯ ಕರುನಾಗಪಲ್ಲಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಸಿ.ಆರ್‌.ಮಹೇಶ್‌, ಸಾಮಾಜಿಕ ಮತ್ತು ಧಾರ್ಮಿಕ ಸಂಘಟನೆ ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಂ ಪ್ರಧಾನ ಕಾರ್ಯದರ್ಶಿ ವೆಲ್ಲಪಳ್ಳಿ ನಟೇಶನ್‌ ಸೇರಿದಂತೆ ದೇಶದ ವಿವಿಧೆಡೆಯ ಪ್ರಮುಖ ಸಂತರು, ಗಣ್ಯರು ಭಾಗವಹಿಸಿದ್ದರು.

ಯೋಜನೆಗಳಿಗೆ ಚಾಲನೆ ಕಾರ್ಯಕ್ರಮದಲ್ಲಿ ಹಲವು ಯೋಜನೆಗಳಿಗೆ ಚಾಲನೆ ನೀಡಲಾಯಿತು.

  • ಕೊಚ್ಚಿ ಮತ್ತು ಫರೀದಾಬಾದ್‌ನಲ್ಲಿರುವ ಅಮೃತ ಆಸ್ಪತ್ರೆಗಳ ಮೂಲಕ 300 ಉಚಿತ ಶಸ್ತ್ರಕ್ರಿಯೆ ಯೋಜನೆ

  • ಕೇರಳ ತಮಿಳುನಾಡು ಮತ್ತು ಕರ್ನಾಟಕದಲ್ಲಿ 6000 ಉಚಿತ ಶೌಚಾಲಯಗಳ ನಿರ್ಮಾಣ

  • ಅಮೃತ ವಿಶ್ವವಿದ್ಯಾಪೀಠದಲ್ಲಿ ಶಿಕ್ಷಣದಲ್ಲಿ ‘ಅಸಿಸ್ಟೀವ್‌ ಟೆಕ್ನಾಲಜಿ’ಗೆ ಸಂಬಂಧಿಸಿದಂತೆ ನವೀನ ಯುನೆಸ್ಕೊ ಪೀಠ ಸ್ಥಾಪನೆ

  • ಸ್ವಸಹಾಯ ಸಂಘಗಳಿಗೆ ಹೂಡಿಕೆ

ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.