ADVERTISEMENT

ಅಲಂಕಾರಕ್ಕಾಗಿ ರಾಷ್ಟ್ರಧ್ವಜ ಬಳಕೆ: ಕೇಜ್ರಿವಾಲ್ ವಿರುದ್ಧ ಪ್ರಹ್ಲಾದ್ ಪಟೇಲ್ ಆರೋಪ

ಪಿಟಿಐ
Published 28 ಮೇ 2021, 11:11 IST
Last Updated 28 ಮೇ 2021, 11:11 IST
ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್   

ನವದೆಹಲಿ: ‘ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುವಾಗ ರಾಷ್ಟ್ರಧ್ವಜವನ್ನು ಅಲಂಕಾರಿಕವಾಗಿ ಬಳಸಿದ್ದಾರೆ’ ಎಂದು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಪಟೇಲ್ ಆರೋಪಿಸಿದ್ದಾರೆ.

ಈ ಸಂಬಂಧ ಕೇಜ್ರಿವಾಲ್ ಅವರಿಗೆ ಪತ್ರ ಬರೆದಿರುವ ಪಟೇಲ್, ‘ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುವಾಗ ರಾಷ್ಟ್ರಧ್ವಜವು ಕೇಜ್ರಿವಾಲ್ ಅವರ ಹಿಂದೆ ಇತ್ತು. ಇದು ಧ್ವಜಸಂಹಿತೆಯ ಉಲ್ಲಂಘನೆ’ ಎಂದು ದೂರಿದ್ದಾರೆ.

‘ಅವರು ರಾಷ್ಟ್ರಧ್ವಜವನ್ನು ಅಲಂಕಾರಿಕವಾಗಿ ಬಳಸಿದಂತೆ ಕಾಣಿಸುತ್ತದೆ. ಧ್ವಜದ ಮಧ್ಯದಲ್ಲಿರುವ ಬಿಳಿಯ ಭಾಗವು ಕಡಿಮೆಯಾಗಿದ್ದು, ಹಸಿರು ಬಣ್ಣದ ಭಾಗವನ್ನು ಹೆಚ್ಚಿಸಲಾಗಿದೆ. ಗೃಹಸಚಿವಾಲಯವು ನಿರ್ದಿಷ್ಟ ಪಡಿಸಿದ ಭಾರತದ ರಾಷ್ಟ್ರಧ್ವಜ ಸಂಹಿತೆಯ ನಿಬಂಧನೆಗಳಿಗೆ ಇದು ಅನುಗುಣವಾಗಿಲ್ಲ. ದೆಹಲಿ ಮುಖ್ಯಮಂತ್ರಿಯವರು ತಿಳಿದೋ ಅಥವಾ ತಿಳಿಯದೆಯೇ ಇಂಥ ಕೆಲಸ ಮಾಡುತ್ತಾರೆ ಎನ್ನುವುದನ್ನು ನಾನು ನಿರೀಕ್ಷಿಸಿರಲಿಲ್ಲ’ ಎಂದೂ ಪಟೇಲ್ ಪತ್ರದಲ್ಲಿ ಬರೆದಿದ್ದಾರೆ.

ADVERTISEMENT

ಈ ಪತ್ರದ ಪ್ರತಿಯೊಂದನ್ನು ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರಿಗೂ ರವಾನಿಸಲಾಗಿದೆ.

‘ಭಾಷಣಕಾರರು ವೇದಿಕೆಯನ್ನು ಅಲಂಕರಿಸಲು ಧ್ವಜವನ್ನು ಬಳಸಬಾರದು’ ಎಂದು ಹೇಳುವ ರಾಷ್ಟ್ರೀಯ ಗೌರವ ಕಾಯ್ದೆ 1971ರ ಸೆಕ್ಷನ್ 2(ix) ಕಡೆಗೆ ಕೇಜ್ರಿವಾಲ್ ಅವರ ಗಮನವನ್ನು ಪಟೇಲ್ ಸೆಳೆದಿದ್ದಾರೆ.

‘ಭಾರತದ ನಿವಾಸಿಯಾಗಿ ಹಾಗೂ ದೆಹಲಿಯ ಮುಖ್ಯಮಂತ್ರಿಯ ಹುದ್ದೆಯನ್ನು ಹೆಮ್ಮೆಯಿಂದ ಅಲಂಕರಿಸುವ ನೀವು ತ್ರಿವರ್ಣಧ್ವಜದ ಗೌರವ ಮತ್ತು ಘನತೆಯನ್ನು ಕಾಪಾಡಬೇಕು ಎಂದು ಎಲ್ಲರೂ ಬಯಸುತ್ತಾರೆ’ ಎಂದೂ ಅವರು ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.