ADVERTISEMENT

ಚುನಾವಣೆ ಫಲಿತಾಂಶದ ಬಗ್ಗೆ ಜುಕರ್‌ಬರ್ಗ್ ಹೇಳಿಕೆ ತಪ್ಪಾಗಿದೆ: ಅಶ್ವಿನಿ ವೈಷ್ಣವ್‌

​ಪ್ರಜಾವಾಣಿ ವಾರ್ತೆ
Published 13 ಜನವರಿ 2025, 15:53 IST
Last Updated 13 ಜನವರಿ 2025, 15:53 IST
ಅಶ್ವಿನಿ ವೈಷ್ಣವ್
ಅಶ್ವಿನಿ ವೈಷ್ಣವ್   

ನವದೆಹಲಿ: ಮೆಟಾ ಮುಖ್ಯಸ್ಥ ಮಾರ್ಕ್‌ ಜುಕರ್‌ಬರ್ಗ್‌ ಅವರು ಕಳೆದ ಲೋಕಸಭಾ ಚುನಾವಣೆ ಫಲಿತಾಂಶದ ಬಗ್ಗೆ ನೀಡಿದ್ದ ಹೇಳಿಕೆಯು ವಾಸ್ತವವಾಗಿ ತಪ್ಪಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು ಸೋಮವಾರ ಹೇಳಿದರು.

ಕೋವಿಡ್‌ ಸಾಂಕ್ರಾಮಿಕದ ಬಳಿಕ ಭಾರತ ಸೇರಿದಂತೆ ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಸರ್ಕಾರಗಳು 2024ರ ಚುನಾವಣೆಯಲ್ಲಿ ಅಧಿಕಾರವನ್ನು ಕಳೆದುಕೊಳ್ಳಲಿವೆ ಎಂದು ಜುಕರ್‌ಬರ್ಗ್‌ ಹೇಳಿದ್ದರು.

‘ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ ಭಾರತದಲ್ಲಿ 2024ರಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಿತು. 64 ಕೋಟಿ ಮತದಾರರು ಭಾಗಿಯಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎಗೆ ಮತದಾರರು ಮತ್ತೊಮ್ಮೆ ಜನಾದೇಶ ನೀಡಿದ್ದಾರೆ’ ಎಂದು ‘ಎಕ್ಸ್‌’ನಲ್ಲಿ ಹೇಳಿದ್ದಾರೆ.

ADVERTISEMENT

‘80 ಕೋಟಿ ಜನರಿಗೆ ಉಚಿತ ಆಹಾರ, 220 ಕೋಟಿ ಡೋಸ್‌ ಲಸಿಕೆ ವಿತರಣೆ, ಕೋವಿಡ್‌ ಸಂದರ್ಭದಲ್ಲಿ ಜಗತ್ತಿನ ಹಲವು ದೇಶಗಳಿಗೆ ನೆರವು ಸೇರಿದಂತೆ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂಬ ಪಟ್ಟವು ಪ್ರಧಾನಿ ಮೋದಿ ಅವರಿಗೆ ಸತತ ಮೂರನೇ ಬಾರಿಗೆ ಗೆಲುವು ತಂದುಕೊಟ್ಟಿತು’ ಎಂದು ಹೇಳಿದ್ದಾರೆ.

‘ಜುಕರ್‌ಬರ್ಗ್‌ ಅವರಿಂದ ತಪ್ಪು ಮಾಹಿತಿ ಬಂದಿರುವುದು ಬೇಸರದ ಸಂಗತಿ. ವಾಸ್ತವ ಮತ್ತು ವಿಶ್ವಾಸಾರ್ಹತೆಯನ್ನು ಎತ್ತಿ ಹಿಡಿಯೋಣ’ ಎಂದು ಮೆಟಾವನ್ನು ಟ್ಯಾಗ್‌ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.